ಉಡುಪಿ: ಪೆರ್ಡೂರು ಕುಕ್ಕುಂಜಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ನಾಪತ್ತೆ ಹಾಗೂ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಂಶಯ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ತಂದೆ ಕರುಣಾಕರ ಶೆಟ್ಟಿ ದೂರು ನೀಡಿದ್ದಾರೆ. ಮಗನ ಜತೆಗೆ ಹೊಳೆ ಬದಿಗೆ ಹೋಗಿದ್ದ ನವೀನ್ (25) ಮೇಲೆ ಸಂಶಯ ವ್ಯಕ್ತವಾಗಿದೆ.
ನ.10ರಂದು ಶ್ರೀಶಾನ್ ತಂದೆಯೊಂದಿಗೆ ಪೆರ್ಡೂರು ಪೇಟೆಗೆ ಬಂದಿದ್ದು ಆ ಬಳಿಕ ಅಜ್ಜಿಯ ಮನೆಗೆ ಹೋಗಿ ಬರುವೆನೆಂದು ತಿಳಿಸಿ ತಂದೆಯ ಸ್ಕೂಟರ್ ತೆಗೆದುಕೊಂಡು ಹೋಗಿದ್ದನು. ಅಲ್ಲಿ ನೆರೆಮನೆಯ ಯುವಕ ನವೀನ್ ಎಂಬವನೊಂದಿಗೆ ಹೊಳೆಯ ಬದಿ ಹೋಗುವುದಾಗಿ ತಂದೆಗೆ ಕರೆ ಮಾಡಿ ತಿಳಿಸಿ ತೆರಳಿದ್ದ. ಆ ಬಳಿಕ ಬಾಲಕ ನಾಪತ್ತೆಯಾಗಿದ್ದು ಸಂಜೆಯಾದರೂ ಪತ್ತೆಯಾಗದೆ ಇದ್ದಾಗ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ನವೀನ್ ಬಳಿ ವಿಚಾರಿಸಿದಾಗ ಆತ ಶ್ರೀಶಾನ್ ತನ್ನನ್ನು ಬಿಟ್ಟು ತಂದೆ ಮನೆಗೆ ಹೋಗುವುದಾಗಿ ತಿಳಿಸಿ ತೆರಳಿದ್ದ. ಅನಂತರ ಏನಾಗಿದೆ ಎಂದು ನನಗೆ ಗೊತ್ತಿಲ್ಲ ಎಂದು ಮಾಹಿತಿ ನೀಡಿದ್ದೆ. ಮರುದಿನ ಬೆಳಗ್ಗೆ ಬಾಲಕನ ಶವ ಮಡಿಸಾಲು ಹೊಳೆಯಲ್ಲಿ ಪತ್ತೆಯಾಗಿತ್ತು. ಆತ ತೆಗೆದುಕೊಂಡು ಹೋಗಿದ್ದ ಸ್ಕೂಟರ್‌ನ ಬಗ್ಗೆ ವಿಚಾರಿಸಿದಾಗ ನವೀನ್ ತನ್ನ ಮನೆಯ ಪಕ್ಕದಲ್ಲಿರುವ ಹೊಂಡದಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ ಯಾಕೆ ಹಾಗೆ ಮಾಡಿರುವೆ ಎಂದು ಪ್ರಶ್ನಿಸಿದಾಗ ಪ್ರಕರಣ ತನ್ನ ಮೇಲೆ ಬರುವ ಸಾಧ್ಯತೆಯಿದ್ದು ಮನೆಯವರು ಬೈಯ್ಯುತ್ತಾರೆ ಎಂಬ ಕಾರಣದಿಂದ ಸ್ಕೂಟರನ್ನು ಅಡಗಿಸಿದ್ದೆ ಎಂದಿದ್ದನು.
ಇದೀಗ ಬಾಲಕನ ಪೋಷಕರಿಗೆ ನವೀನ್ ಬೆಳಗಿನವರೆಗೂ ಶ್ರೀಶಾನ್ ಮೃತಪಟ್ಟ ವಿಚಾರ ಗೊತ್ತಿದ್ದರೂ ತಿಳಿಸದೇ ಇದ್ದದ್ದು ಹಾಗೂ ಸ್ಕೂಟರನ್ನು ಅಡಗಿಸಿಟ್ಟ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಸತ್ಯಾಂಶ ಪತ್ತೆಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.


















