ಇವರ ಕೈ ರುಚಿಯ ಸಕ್ಕರೆ ಮಿಠಾಯಿ, ಬತ್ತಾಸು ತಿಂದ್ರೆ ಆಹಾ ಅಂತೀರಾ! : ಇವರು ಪೆರ್ಡೂರಿನ ಸ್ವೀಟ್ ಸ್ಪೆಷಲಿಸ್ಟ್ !

“ಫೈವ್ star ತಿಂದರೆ ಕಳೆದೇ ಹೋಗ್ತೀರಿ” ಅನ್ನೋ ಚಾಕ್ಲೇಟ್ ಜಾಹೀರಾತನ್ನು ನೋಡಿ ನಾವೆಲ್ಲ ಬಾಯಲ್ಲಿ ನೀರು ಸುರಿಸಿರಬಹುದು. ಆದರೆ ಫೈವ್ star ಅನ್ನೇ ಮೀರಿದ ಸಹಜ ಸುಂಗಂಧದ, ಆಪ್ತ ರುಚಿಯ ಈ ಸಿಹಿತಿಂಡಿ ತಿಂದರೆ ಸಾಕು, ಬಾಯಿ “ಆಹಾ ಏನ್ ರುಚಿ” ಅನ್ನುತ್ತದೆ, ಈ ಮಧುರ ತಿಂಡಿಯ ಹಿತಾನುಭವವನ್ನು ವ್ಯಕ್ತಪಡಿಸಲು ಸಾಧ್ಯವಾಗದೇ, ಹಾಗೇ ಚಪ್ಪರಿಸುತ್ತ ಇನ್ನೊಂದು ಪೀಸನ್ನು ಕೈಗೆತ್ತಿಕೊಂಡು ತಿಂದು ಕರಗಿಸಿಯೇ ಬಿಡುತ್ತೀರಿ !
ಪೆರ್ಡೂರಿನ ಯುವಕ ಕೀರ್ತಿ ಶೇಟ್ ಅವರ ಕೈರುಚಿಯಲ್ಲಿ ತಯಾರಾದ ಈ ಸಿಹಿ ಸಿಹಿ ಖಾದ್ಯವೇ ಬೆಂಡು ಬತ್ತಾಸು ಮತ್ತು ಘಮ್ ಘಮ್ಮೆನ್ನುವ ಸಕ್ಕರೆ ಮಿಠಾಯಿ. ಊರ ಜಾತ್ರೆಯ ಸಂಭ್ರಮವನ್ನು ಸುಖಿಸುವವರಿಗೆ ಬತ್ತಾಸಿನ ಪರಿಚಯ ಇರದೇ ಇರಲು ಹೇಗೆ ಸಾಧ್ಯ?
ಆಹಾ ಈ ಸಿಹಿ ಅದೆಷ್ಟು ರುಚಿಯೆಂದರೆ ನಮ್ಮ ತುಳುನಾಡಿನ ಸಕಲ ಪರಂಪರೆ, ಗ್ರಾಮೀಣ ಸೊಗಡಿನ ವೈವಿದ್ಯತೆಗಳ ರಸವನ್ನೆಲ್ಲಾ ಹೀರಿಕೊಂಡಿದೆ ಈ ಬತ್ತಾಸು.ಅಂದ ಹಾಗೆ ಇದು ಬೆಲ್ಲದ ಬತ್ತಾಸಲ್ಲ, ಸಕ್ಕರೆಯ ಬತ್ತಾಸು.

 

ಚಿತ್ರ:ರಾಮ್ ಅಜೆಕಾರ್
 ಆಸೆ ಹುಟ್ಟಿಸೋ ಬತ್ತಾಸು !
ಪೆರ್ಡೂರು ಅನ್ನೋ ಅನಂತ ಪದ್ಮನಾಭನ ಪುಟ್ಟ ಕನಸಿನಂತಹ ಊರಲ್ಲಿದ್ದುಕೊಂಡು ಇಡೀ ತುಳುನಾಡಿಗೆ ಸ್ವಾಧಿಷ್ಟಪೂರ್ಣ ಬತ್ತಾಸು, ತರಹೇವಾರಿ ಸಕ್ಕರೆ ಮಿಠಾಯಿ, ಬಗೆ ಬಗೆ ಚಕ್ಕುಲಿ, ಜಿಲೇಬಿ, ಲಡ್ಡು, ಕಡಿ, ಜಾಮೂನುಗಳ ಸಿಹಿ ಹಂಚುತ್ತಿರುವ ಕೀರ್ತಿಯವರ ಮಾತು ಕೂಡ ಅಷ್ಟೇ ಸಿಹಿ.  ಸುಮಾರು 17 ವರ್ಷದಿಂದ ಸಿಹಿಸಿಹಿ ಖಾದ್ಯಗಳನ್ನು ತಯಾರು ಮಾಡುತ್ತ ,ಸಾವಿರಾರು ಬಾಯಿಗಳಿಗೆ ಸಿಹಿ ಹಂಚಿರುವ ಕೀರ್ತಿ, ಪುಟ್ಟ ಮಕ್ಕಳ ಬಳಿ ಹಣ ಇಲ್ಲದಿದ್ದರೂ” ತಗೊಳ್ಳಿ ಹಣ ಬೇಡ”ಎಂದು ಹಂಚಿದ್ದುಂಟು.
“ಸಿಹಿ ತಿಂಡಿ ಅನ್ನೋದು ನನ್ನ ಬದುಕಿನ ಪರಂಪರೆ, ನಾನಿರುವವರೆಗೂ ಸಿಹಿ ಹಂಚುತ್ತಾ ಹೋಗುತ್ತೇನೆ. ಮುಂದೆ ಇದು ಉಳಿಯುತ್ತದೋ ನಂಗೆ ಗೊತ್ತಿಲ್ಲ, ಇಷ್ಟೊಂದೆಲ್ಲಾ ಕಷ್ಟ ಪಟ್ಟು ಸಿಹಿ ತಿಂಡಿ ಮಾಡುವ ಉಸಾಬರಿ ಈ ಕಾಲದಲ್ಲಿ ಯಾರಿಗೆ ಬೇಕು ಹೇಳಿ? ನನಗಂತೂ ಇದೇ ಖುಷಿ” ಎನ್ನುತ್ತಾ ಬತ್ತಾಸಿನ‌ ಪಾಕದಂತೆಯೇ ಮಾತಾಡುತ್ತಾರೆ.
ಪಾಕ ಅನ್ನೋ ಕನಸಿನ ಲೋಕ:
ಒಂದು ಕಾಲದಲ್ಲಿ ಇದರ ಉಸಾಬರಿಯೇ ಬೇಡವೆಂದು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಕೀರ್ತಿ, ಕೊನೆಗೆ ವಿದೇಶದ ಬದುಕೇ ಬೇಡವೆಂದು ಊರಿಗೆ ಮರಳಿದರು, ಇಲ್ಲಿ ಅಜ್ಜನ ಕಾಲದಿಂದಲೂ ಬಳುವಳಿಯಾಗಿ ಬಂದ ಸಿಹಿಯ ಪ್ರಪಂಚವಿತ್ತು. ಜಿಲೇಬಿಯ ಅಂಟಿನ‌‌‌‌ ನಂಟಿತ್ತು. ಅದನ್ನೇ ಬೆಚ್ಚಗೇ ಹಿಡಿದ ಕೀರ್ತಿಯ ಬಾಳೆಲ್ಲಾ ಈಗ ಸಿಹಿಯ ಪಾಕ, ಅದೇ ಇವರಿಗೆ ನನಸಿನ ಲೋಕ.
ಜಾತ್ರೆಯ ಬತ್ತಾಸು ಅಂತ ಸಸಾರ ಮಾಡಬೇಡಿ. ಅಪ್ಪಟ ದೇಶಿ ಸ್ವಾದದ ಈ ತಿಂಡಿ ಕೊಡುವ ಸುಃಖವನ್ನು‌ ಬಿಗ್ ಬಜಾರ್ ನ ಬಣ್ಣದ ಸಾಲಲ್ಲಿ‌ ಶಿಸ್ತಾಗಿ ಕೂತ ಮಿರಿಮಿರಿ ಬೆಗಡೆಯ ಚಾಕ್ಲೇಟ್ ಗಳು ಕೊಡಲಾರವು. ಕೊಟ್ಟರೂ ಅದರಲ್ಲಿ ಊರೊಂದರ ಪರಿಮಳ ಇರುವುದಿಲ್ಲ, ಗ್ರಾಮೀಣ ಪರಂಪರೆ, ಸಂಸ್ಕೃತಿ, ಸ್ವಚ್ಛಂದತೆಯ ಸೊಗಸಿರುವುದಿಲ್ಲ.
ಚಂದದ ಸಿಹಿ ಖಾದ್ಯಗಳಿಗಾಗಿ ಕೀರ್ತಿ ಶೇಟ್ ಪೆರ್ಡೂರು ಅವರನ್ನು ಸಂಪರ್ಕಿಸಿ:7975081299