ಥಿಯೇಟರ್ ಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ: ನಟ ಪುನೀತ್ ರಾಜ್ ಕುಮಾರ್ ಅಸಮಾಧಾನ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸಿನೆಮಾ ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ ಜಾರಿಗೊಳಿಸಿದೆ.

ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ಕ್ರಮದಿಂದ ಸ್ಯಾಂಡಲ್ ವುಡ್ ಗೆ ಸಂಕಷ್ಟ ಎದುರಾಗಿದೆ. ಕಳೆದೊಂದು ವರ್ಷದಿಂದ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿದ್ದ ಚಿತ್ರಲೋಕಕ್ಕೆ ಸರ್ಕಾರದ ತೀರ್ಮಾನ ಬಿಸಿತುಪ್ಪವಾಗಿ ಪರಿಣಮಿಸಿದೆ.

ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನೆಮಾ ಏ. 1ರಂದು ಬಿಡುಗಡೆಯಾಗಿತ್ತು. ಪ್ರೇಕ್ಷಕರಿಗೆ ಇಷ್ಟವಾಗಿ ಮೆಚ್ಚುಗೆ ಗಳಿಸಿ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಕೂಡ ಆಗಿತ್ತು. ನಾಳೆಯವರಿಗೆ ಟಿಕೆಟ್ ಮಾರಾಟವಾಗಿ ಜನ ಥಿಯೇಟರ್ ಗಳಲ್ಲಿ ಸೀಟುಗಳನ್ನು ಕಾಯ್ದಿರಿಸಿದ್ದರು. ಇದೀಗ ಸರ್ಕಾರದ ನಿರ್ಧಾರ ಯುವರತ್ನ ಚಿತ್ರದ ನಿರ್ಮಾಪಕರಿಗೆ, ವಿತರಕರಿಗೆ ಆರ್ಥಿಕ ನಷ್ಟ ಉಂಟಾಗಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಪುನೀತ್ ರಾಜ್ ಕುಮಾರ್, ಏ.1ರಂದು ಯುವರತ್ನ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾಗೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಈಗ ಇದ್ದಕ್ಕಿದ್ದ ಹಾಗೆ ಸರ್ಕಾರ ಈ ರೀತಿ ಹೊಸ ನಿಯಮ ಜಾರಿಗೆ ತಂದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.

ಸಿನಿಮಾ ನೋಡಲು ಬರುವ ಎಲ್ಲರೂ ಸಹ ಕೊರೋನಾ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ದಯವಿಟ್ಟು ಶೆ.50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಮೂರ್ನಾಲ್ಕು ದಿನ ಮುಂಚಿತವಾಗಿ ಆದರೂ ಮಾಹಿತಿ ನೀಡಬೇಕಿತ್ತು. ಈಗಾಗಲೇ ಭಾನುವಾರದ ತನಕ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈಗ ಈ ರೀತಿ ನಿರ್ಧಾರಗಳನ್ನ ತೆಗೆದುಕೊಂಡಾಗ ನಮಗೆ ಕಷ್ಟ ಆಗುತ್ತೆ. ನಮಗೂ ಕೂಡ ಸರ್ಕಾರದ ನಿರ್ಧಾರದಿಂದ ಶಾಕ್‌ ಆಗಿದೆ ಎಂದರು.

ಇಂದು ಸಭೆ: ಥಿಯೇಟರ್ ಗಳಲ್ಲಿ ಶೇಕಡಾ 50ರಷ್ಟು ಸೀಟು ಭರ್ತಿಗೆ ಸಂಬಂಧಪಟ್ಟಂತೆ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದ್ದು, ಅಲ್ಲಿ ಪ್ರಮುಖ ಕಲಾವಿದರು, ವಿತರಕರು, ನಿರ್ಮಾಪಕರು, ನಿರ್ದೇಶಕರು ಸೇರಿ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.