ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ಕಂಬ, ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮನೆಯೊಂದರ ಅಂಗಳಕ್ಕೆ ನುಗ್ಗಿದ ಘಟನೆ ಶನಿವಾರ ರಾತ್ರಿ ಉಡುಪಿಯ ಪೆರಂಪಳ್ಳಿ ಮೀನು ಮಾರುಕಟ್ಟೆ ಸಮೀಪ ಸಂಭವಿಸಿದೆ.
ಮಣಿಪಾಲದಿಂದ ಪೆರಂಪಳ್ಳಿ ಮಾರ್ಗವಾಗಿ ಸಾಗುತ್ತಿದ್ದ ಲಾರಿಯು ರಾತ್ರಿ ಸುಮಾರು 9 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಮೊದಲು ಟ್ರಾನ್ಸ್ಫಾರ್ಮರ್ ಕಂಬ ಹಾಗೂ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ರವಿ ಪೂಜಾರಿ ಅವರಿಗೆ ಸೇರಿದ ಮನೆಯ ಅಂಗಳಕ್ಕೆ ನುಗ್ಗಿದೆ.
ಪರಿಣಾಮ ಮನೆಯ ಸಿಮೆಂಟ್ ಶೀಟ್ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಜಖಂಗೊಂಡಿದೆ.
ಲಾರಿ ಚಾಲಕ ನಿದ್ರೆಗೆ ಜಾರಿದ್ದರಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದ ವೇಳೆ ರಸ್ತೆಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಯಾರೂ ಇರದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಡಿಕ್ಕಿಯ ರಭಸಕ್ಕೆ ಟ್ರಾನ್ಸ್ಫಾರ್ಮರ್ ಕಂಬ ಮುರಿದು ಬಿದ್ದಿದ್ದು, ಶನಿವಾರ ರಾತ್ರಿಯಿಂದ ಆ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.
ಭಾನುವಾರ ಬೆಳಿಗ್ಗೆ ಎರಡು ಕ್ರೇನ್ಗಳ ಸಹಾಯದಿಂದ ಲಾರಿಯನ್ನು ಸ್ಥಳದಿಂದ ತೆರವುಗೊಳಿಸಲಾಯಿತು.















