ಉಡುಪಿ: ಗುಜರಾತ್ ನಲ್ಲಿನ ಗೆಲವು ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ಕರ್ನಾಟಕ ಚುನಾವಣೆಗೆ ದಿಕ್ಸೂಚಿಯಾದರೆ ಹಿಮಾಚಲ ಪ್ರದೇಶ ಚುನಾವಣೆ ಕೂಡ ಯಾಕೆ ದಿಕ್ಸೂಚಿಯಾಗಬಾರದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಈ ಹಿಂದಿನ ಚುನಾವಣೆಗಿಂತ ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ವೇನಿಲ್ಲ. ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಒಡ್ಡಿ ಕಾಂಗ್ರೆಸ್ ಮತಗಳನ್ನು ಪಡೆದುಕೊಂಡಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನೇ ಕಬಳಿಸಿದೆ. ಇದರಿಂದ ಗುಜರಾತ್ ನಲ್ಲಿ ಹಿನ್ನಡೆಯಾಗಿದೆ. ಕೇವಲ ಗುಜರಾತ್ ರಾಜ್ಯದ ಚುನಾವಣಾ ಫಲಿತಾಂಶವನ್ನು ಮಾತ್ರ ವಿಶ್ಲೇಷಣೆ ಮಾಡುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಆಡಳಿತ ದಲ್ಲಿದ್ದು ಕೂಡ ಸೋಲು ಕಂಡಿರುವುದನ್ನು ಯಾಕೆ ಹೇಳುತ್ತಿಲ್ಲ. ಸತತ 15 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ನಡೆಸಿಯೂ ಬಿಜೆಪಿ ಸೋತಿರುವುದು ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿ ಸೋಲಲು ಹಾಕಿರುವ ಬುನಾದಿ ಎನ್ನುವುದನ್ನು ಮರೆಯಬಾರದು.
ಬಿಜೆಪಿಯ ಜನವಿರೋಧಿ ನೀತಿಗಳಿಂದ ಬೇಸತ್ತಿರುವ ಜನತೆ ಹಿಮಾಚಲ ಪ್ರದೇಶ ಹಾಗೂ ದೆಹಲಿಯ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಿದ್ದಾರೆ. ಗುಜರಾತ್ ನಲ್ಲಿ ಅಲ್ಲಿನ ಸ್ಥಳೀಯ ವಿಚಾರಗಳ ಮೇಲೆ ಫಲಿತಾಂಶ ನಿರ್ಧಾರಿತವಾಗಿದ್ದು ಕರ್ನಾಟಕದಲ್ಲಿಯೂ ಭ್ರಷ್ಟ ಹಾಗೂ ಜನವಿರೋಧಿ ಸರಕಾರವಿದ್ದು ಮುಂದಿನ ದಿನಗಳಲ್ಲಿ ಹಿಮಾಚಲ ಪ್ರದೇಶದಂತೆ ಇಲ್ಲಿಯೂ ಕೂಡ ಜನರು ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಮತ್ತು ಕಾಂಗ್ರೆಸ್ ಗೆ ಮತ್ತೆ ಅವಕಾಶ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.