ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ತೀವ್ರವಾದ ಕೋವಿಡ್ -19 ಸೋಂಕಿನಿಂದ ಬಳಲಿದ್ದವರು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ.
ಗುಜರಾತ್‌ನ ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ವಿಷಯದ ಬಗ್ಗೆ ವಿವರವಾದ ಅಧ್ಯಯನ ನಡೆಸಿದೆ. ತೀವ್ರವಾದ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರು ಶ್ರಮದಾಯಕ ವ್ಯಾಯಾಮಗಳನ್ನು ಮಾಡುವುದರಿಂದ ದೂರವಿರಬೇಕು ಎಂದು ಮಂಡಳಿ ಗಮನಿಸಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಾಸಂಗಿಕವಾಗಿ, 2022 ರ ಕೊನೆಯಿಂದ ತಮ್ಮ 20 ಮತ್ತು 30 ರ ಹರೆಯದಲ್ಲಿ ಹೃದಯಾಘಾತದಿಂದ ಯುವಜನರು ಸಾಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಬಹುತೇಕ ಜನರು ಈ ಸಾವುಗಳನ್ನು ಕೋವಿಡ್ ಅಥವಾ ಅದರ ಚಿಕಿತ್ಸೆ ಜೊತೆ ತಾಳೆ ಹಾಕುತ್ತಿದ್ದಾರೆ.