ನಾರಾಯಣ ಗುರು ಸಂದೇಶ ಸಾಮರಸ್ಯ ಜಾಥಾಕ್ಕೆ ವಿವಿಧ ಧರ್ಮೀಯರಿಂದ ಸೌಹಾರ್ದ ಸ್ವಾಗತ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಪ್ರವೀಣ್ ಎಂ. ಪೂಜಾರಿ ನೇತೃತ್ವದಲ್ಲಿ ಉಡುಪಿಯಿಂದ ಹೆಜಮಾಡಿವರೆಗೆ ಆಯೋಜಿಸಿರುವ ‘ಗುರು ಸಂದೇಶ ಸಾಮರಸ್ಯ ಜಾಥಾ’ಕ್ಕೆ ಕಾಪು ಮತ್ತು ಮೂಳೂರಿನಲ್ಲಿ ವಿವಿಧ ಧರ್ಮೀಯರು ಸೌಹಾರ್ದ ಸ್ವಾಗತ ನೀಡಿದರು.

ಕಾಪುವಿನ ಮಸೀದಿ ಎದುರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಜಾಥಾವನ್ನು ಸ್ವಾಗತಿಸಿ, ತಂಪು ಪಾನೀಯ ಹಾಗೂ ಸಿಹಿತಿಂಡಿಗಳನ್ನು ವಿತರಿಸಿದರು.

ಮುಂದೆ ಮೂಳೂರಿನಲ್ಲಿ ಕ್ರೈಸ್ತ ಸಮುದಾಯದವರು ಜಾಥಾದಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ ವಿತರಿಸಿದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದಲೂ ಜಾಥಾದಲ್ಲಿ ಭಾಗವಹಿಸಿದವರಿಗೆ ತಂಪು ಪಾನೀಯ ನೀಡಲಾಯಿತು.

ಈ ಸಂದರ್ಭದಲ್ಲಿ ನಾರಾಯಣ ಗುರುಗಳ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.