ಉಡುಪಿ: 80 ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜೀವನಗರ- ಪ್ರಗತಿನಗರ ಮುಖ್ಯ ರಸ್ತೆಯಲ್ಲಿ ಡಾಂಬರು ಕಿತ್ತುಹೋಗಿ ಬೃಹತಾಕಾರದ ಹೊಂಡಬಿದ್ದಿದ್ದು, ಸಾರ್ವಜನಿಕರು ಆರಾಮಾಗಿ ಸಂಚರಿಸಲು ಸಾಧ್ಯವಾಗದಿರುವಷ್ಟು ದುಸ್ಥಿತಿಗೆ ರಸ್ತೆ ತಲುಪಿದೆ. ರಸ್ತೆಯ ತುಂಬಾ ಕೆಸರು ನೀರು ನಿಂತಿದ್ದು, ವಾಹನ ಸವಾರರು ಸರ್ಕಸ್ ಮಾಡಿಕೊಂಡು ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಕೆರೆಯೊಳಗೆ ರಸ್ತೆಯೋ, ರಸ್ತೆಯೊಳಗೆ ಕೆರೆಯೋ ಎನ್ನುವಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ.
ರಾಜೀವನಗರ ಜಂಕ್ಷನ್ ನಲ್ಲಿ ದೊಡ್ಡ ಗುಂಡಿ ನಿರ್ಮಾಣ ಆಗಿದ್ದು, ಮಳೆನೀರು ನಿಂತು ಕೆರೆಯಂತಾಗಿದೆ. ಸಾರ್ವಜನಿಕರು ಓಡಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ರಸ್ತೆ ದುರಸ್ಥಿ ಮಾಡುವಂತೆ ಸ್ಥಳೀಯರು ಗ್ರಾಪಂಗೆ ಮನವಿ ಮಾಡಿದ್ದಾರೆ. ಆದರೆ, ಈ ರಸ್ತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಂಚಾಯತ್ ಕೈತೊಳೆದುಕೊಂಡಿದೆ. ಇದು ಮಣಿಪಾಲವನ್ನು ಕರ್ವಾಲಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ನಿತ್ಯ ನೂರಾರು ಮಂದಿ ಈ ಮಾರ್ಗವಾಗಿ ಸಂಚರಿಸುತ್ತಾರೆ. ಸಂಬಂಧಪಟ್ಟವರು ರಸ್ತೆ ದುರಸ್ಥಿಗೆ ಹಿಂದೇಟು ಹಾಕುತ್ತಿರುವುದರಿಂದ ಜನರ ಗೋಳು ಕೇಳುವವರಾರಯ್ಯ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.