ಬೆಂಗಳೂರಿನಲ್ಲಿ ಬೈಂದೂರು ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ: ಕಠಿಣ ಕ್ರಮಕ್ಕೆ ಒಕ್ಕೊರಲ ಆಗ್ರಹ

ಬೆಂಗಳೂರು: ಹೊಟ್ಟೆಪಾಡಿಗೆಂದು ಊರು ಬಿಟ್ಟು ಪರವೂರು ಸೇರಿ ನಿಯತ್ತಿನಿಂದ ದುಡಿಯುತ್ತಿದ್ದ ಯುವಕರ ಮೇಲೆ ಸಿಗರೇಟಿನ ಹಣ ಕೇಳಿದರೆನ್ನುವ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ.

ಬೆಂಗಳೂರಿನ ಕುಂದಲಹಳ್ಳಿ ಎಚ್.ಎ.ಎಲ್ ಸಮೀಪ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರ ಬೈಂದೂರು ಮೂಲದ ನವೀನ್ ಕುಮಾರ್, ಪ್ರಜ್ವಲ್ ಶೆಟ್ಟಿ, ನಿತಿನ್ ಶೆಟ್ಟಿ ಎಂಬುವರ ಮೇಲೆ  ಗುರುವಾರದಂದು ಬೆಂಗಳೂರಿನ ಪುಡಿ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಗಳ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಆದಾಗ್ಯೂ, ಜನರ ಆಕ್ರೋಶ ಮಾತ್ರ ಇನ್ನೂ ತಣ್ಣಗಾಗಿಲ್ಲ. ತಪ್ಪಿತಸ್ಥರ ವಿರುದ್ದ ಕಠಿಣಕ್ರಮ ಕೈಗೊಂಡು ಮುಂದೆ ಇಂತಹ ಘಟನೆ ಮರುಕಳಿಸಿದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದಿನೇ ದಿನೇ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಇಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಹಲ್ಲೆಗೊಳಗಾದವರು ಬೈಂದೂರು ಶಾಸಕರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸ್ಪಂದಿಸಿದ ಶಾಸಕ ಸೂಕ್ತ ಕ್ರಮಕೈಗೊಳ್ಳುವಂತೆ ಗೃಹಸಚಿವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಎಂಟು ಮಂದಿ ದುಷ್ಕರ್ಮಿಗಳ ಪೈಕಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

Image
ಕೃಪೆ: ಬೆಂಗಳೂರು ನಗರ ಪೊಲೀಸ್

ಏತನ್ಮಧ್ಯೆ, ಕುಂದಲಹಳ್ಳಿ ಬೇಕರಿಯವರ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ,ಹಲ್ಲೆ ನಡೆಸಿದವರಿಗೆ ಕಠಿಣ ಸಜೆಗೆ ಒತ್ತಾಯಿಸಿ ರವಿವಾರದಂದು ಕಾಂಡಿಮಟ್ಸ್ ಮತ್ತು ಬೇಕರಿಯವರು ತೋಳಿಗೆ ಕಪ್ಪು ಬಟ್ಟೆ ಕಟ್ಟಿ ವ್ಯಾಪಾರ ಮಾಡುವಂತೆ ನೃಪತುಂಗ-ಕನ್ನಡಧ್ವನಿ ಒತ್ತಾಯಿಸಿದೆ.