ಕುರ್ಕಾಲು: ರಾಜ್ಯ ಬಿಜೆಪಿ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಬೂತ್- ಬೂತ್ ಭೇಟಿ ಕಾರ್ಯಕ್ರಮದಡಿ ಗುರುವಾರ ಆಯೋಜಿಸಿದ್ದ ಕುರ್ಕಾಲು ಗ್ರಾಮದ ಬೂತ್ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಗ್ರಾಮೀಣಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದರ ಜತೆಗೆ ಗ್ರಾಮೀಣ ಭಾಗದಲ್ಲಿ ಸಮರ್ಪಕ ಸಂಪರ್ಕ ರಸ್ತೆಗಳ ನಿರ್ಮಾಣ ಯೋಜನೆ, ವ್ಯವಸ್ಥಿತ ದಾರಿದೀಪಗಳ ಅಳವಡಿಕೆ, ನಿರಂತರ ಕುಡಿಯುವ ನೀರಿನ ವ್ಯವಸ್ಥೆ, ವಸತಿ ನಿರ್ಮಾಣ, ವಿದ್ಯುತ್ ಸಂಪರ್ಕ, ಸಮರ್ಪಕ ಪಡಿತರ ವಿತರಣಾ ವ್ಯವಸ್ಥೆ, ಮಾಸಾಶನ, ವೃದ್ಧಾಪ್ಯ ವೇತನ ಮೊದಲಾದ ಜನಪರ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿತ್ತು ಎಂದರು.
ಇಂದಿನ ಬಿಜೆಪಿ ಸರ್ಕಾರ ಜನಪರ ಕಾರ್ಯಕ್ರಮಗಳಿಗೆ ಕತ್ತರಿ ಹಾಕುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಪಿಂಚಣಿ ಯೋಜನೆಗಳನ್ನು ರದ್ದುಗೊಳಿಸಿ ಬಡವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಜನವಿರೋಧಿ ಆಡಳಿತ, ಕೊರೊನಾ ನಿರ್ವಹಣೆಯ ವೈಫಲ್ಯತೆ ಮತ್ತು ಭ್ರಷ್ಟಾಚಾರ, ರೈತ ಮತ್ತು ಕಾರ್ಮಿಕ ವಿರೋಧಿ ನಿಲುವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಪಕ್ಷದ ಯೋಜನೆಗಳು ಮತ್ತು ಸಾಧನೆಗಳನ್ನು ತಿಳಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಮತ್ತು ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ಸಭೆಯಲ್ಲಿ ಕಾಪು ಬ್ಲಾಕ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಬ್ಲಾಕ್ ಸಮಿತಿ ಉಪಾಧ್ಯಕ್ಷ ದೇವಪುತ್ರ ಆರ್. ಕೋಟ್ಯಾನ್, ಗ್ರಾಮೀಣ ಸಮಿತಿ ಅಧ್ಯಕ್ಷ ಮಹೇಶ್ ಶೆಟ್ಟಿ ಬಿಳಿಯಾರು, ಶೋಭಾ ಸಾಲ್ಯಾನ್, ನತಾಲಿಯ ಡಿಸೋಜ, ಅಖಿಲೇಶ್ ಕೋಟ್ಯಾನ್, ಅಶೋಕ್ ನಾಯರಿ, ಅಣ್ಣಪ್ಪ ಪೂಜಾರಿ ದೆಂದೂರುಕಟ್ಟೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.