ಸಾಮಾಜಿಕ ಭದ್ರತಾ ಯೋಜನೆಯ ಹಣ ನಕಲಿ ಫಲಾನುಭವಿಗಳ ಪಾಲು ಬೆಂಗಳೂರು: ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುತ್ತಿರುವ ವಿವಿಧ ಪಿಂಚಣಿಯ ಹಣ ನಕಲಿ ಫಲಾನುಭವಿಗಳ ಪಾಲಾಗಿರುವುದು ಕಂಡು ಬಂದಿದ್ದು, 17 ಲಕ್ಷಕ್ಕೂ ಅಧಿಕ ಮಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ.
ಈ ತಿಂಗಳ ಅಂತ್ಯದ ಒಳಗೆ ಸೂಕ್ತ ದಾಖಲೆಗಳನ್ನು ಸಲ್ಲಿಸದಿದ್ದರೆ ಸರ್ಕಾರ ಅವರನ್ನು ಯೋಜನೆಯಿಂದ ಕೈಬಿಡಲಿದೆ.
ರಾಜ್ಯದಲ್ಲಿ ಒಟ್ಟು 83 ಲಕ್ಷ ಫಲಾನುಭವಿಗಳಿದ್ದು, ಇದರಲ್ಲಿ 23 ಲಕ್ಷ ಫಲಾನುಭವಿಗಳ ಬಗ್ಗೆ ಸಂದೇಹ ಬಂದಿರುವುದರಿಂದ ಪರಿಶೀಲನೆಗೆ ಒಳಪಡಿಸಲಾಗಿತ್ತು. ದಾಖಲೆಗಳ ತಪಾಸಣೆ ಬಳಿಕ 23 ಲಕ್ಷದಲ್ಲಿ ನಾಲ್ಕು ಲಕ್ಷ ಫಲಾನುಭವಿಗಳು ಅರ್ಹರು ಎಂದು ಖಚಿತವಾಗಿದ್ದು, ಅವರಿಗೆ ಪಿಂಚಣಿ ಮುಂದುವರಿಸಲಾಗಿದೆ.
‘ಸುಮಾರು ಎರಡು ಲಕ್ಷ ಮಂದಿ ನೀಡಿರುವ ವಿಳಾಸದಲ್ಲಿ ಅವರು ವಾಸವಾಗಿಲ್ಲ. ಹೀಗಾಗಿ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನುಳಿದಂತೆ 17 ಲಕ್ಷ ಫಲಾನುಭವಿಗಳಿಗೆ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿ ಸೂಕ್ತ ದಾಖಲೆಗಳನ್ನು ನೀಡಲು ಸೂಚಿಸಲಾಗಿತ್ತು. ಇದಾದ ಬಳಿಕ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ನೋಟಿಸ್ ನೀಡಲಾಗಿದೆ’ ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ, ಸಾಮಾಜಿಕ ಭದ್ರತೆ) ಮನೋಜ್ಕುಮಾರ್ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆದಾಯ ಪ್ರಮಾಣ ಪತ್ರ ಮತ್ತು ವಯಸ್ಸಿನ ದೃಢೀಕರಣ ಪತ್ರ ನೀಡುವಂತೆ ನೋಟಿಸ್ ಮೂಲಕ ಫಲಾನುಭವಿಗಳಿಗೆ ಸೂಚಿಸಲಾಗಿದೆ. ನಮ್ಮ ಅಧಿಕಾರಿಗಳು ಫಲಾನುಭವಿಗಳನ್ನು ಈಗಾಗಲೇ ಸಂಪರ್ಕಿಸಿ, ದಾಖಲೆಗಳನ್ನು ನೀಡುವಂತೆ ಕೇಳಿದರೂ, ಅವರು ನೀಡಿಲ್ಲ. ಹೀಗಾಗಿ ನೋಟಿಸ್ ಪಡೆದವರಲ್ಲಿ ಶೇ 99ರಷ್ಟು ಮಂದಿ ಅನರ್ಹರು ಎಂಬ ಮಾಹಿತಿ ಇದೆ’ ಎಂದು ಅವರು ವಿಶ್ಲೇಷಿಸಿದರು.
ನಕಲಿ ದಾಖಲೆಗಳನ್ನು ಸಲ್ಲಿಸಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಮಾಜಿ ದೇವದಾಸಿಯರ ಮಾಸಾಶನ ಯೋಜನೆ, ಮನಸ್ವಿನಿ ಇತ್ಯಾದಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂಬುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ ಎಂದರು.
ಹೀಗಾಗಿ ನೋಟಿಸ್ ನೀಡಿರುವ ಫಲಾನುಭವಿಗಳಿಗೆ ಮಾರ್ಚ್ನಿಂದ ಜೂನ್ವರೆಗೆ ಪಿಂಚಣಿ ನೀಡಿಲ್ಲ. ಒಂದು ವೇಳೆ ಅವರು ದಾಖಲೆಗಳನ್ನು ನೀಡಿದರೆ ತಕ್ಷಣವೇ ಪಿಂಚಣಿ ಮಂಜೂರಾಗಲಿದೆ ಎಂದು ತಿಳಿಸಿದರು. ನೋಟಿಸ್ ಪಡೆದವರು ದಾಖಲೆ ಸಲ್ಲಿಸಿದರೆ, ತಹಸೀಲ್ದಾರ್ ಹಂತದಲ್ಲೇ ನಿರ್ಧಾರ ತೆಗೆದುಕೊಂಡು ಪಿಂಚಣಿ ಮುಂದುವರಿಸಲಾಗುತ್ತದೆ. ನಿಗದಿತ ಗಡುವಿನ ಒಳಗೆ ದಾಖಲೆ ಸಲ್ಲಿಸದ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟು, ಪಿಂಚಣಿ ಸ್ಥಗಿತಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕಾಗುತ್ತದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ ಎಂದರು.
ವಾರ್ಷಿಕ ₹32 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಮಾತ್ರ ಈ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು, 60 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರುವವರು, ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಕೂಡ ಪಿಂಚಣಿ ಸೌಲಭ್ಯ ಪಡೆಯುತ್ತಿರುವುದು ಗ್ರಾಮ ಆಡಳಿತ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಕಂಡುಬಂದಿದೆ.
ಪಿಂಚಣಿಗಾಗಿ ವಾರ್ಷಿಕ ₹11 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ₹53 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಅರ್ಹರಿಗೆ ಮಾತ್ರ ಇದರ ಪ್ರಯೋಜನ ಸಿಗಬೇಕು. ಸರ್ಕಾರದ ಹಣ ಅನರ್ಹರ ಪಾಲಾಗಬಾರದು ಎಂಬ ಉದ್ದೇಶದಿಂದ ಪರಿಶೀಲನೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯ ನಿಯಮಾವಳಿ ವ್ಯಾಪ್ತಿಯಲ್ಲಿ ಬರುವವರು ಯಾವಾಗ ಬೇಕಾದರೂ ಪಿಂಚಣಿಗೆ ಅರ್ಜಿ ಹಾಕಬಹುದು ಎಂದು ಅವರು ವಿವರಿಸಿದರು.
ಸ್ವಯಂಚಾಲಿತ ವ್ಯವಸ್ಥೆ
60 ವರ್ಷ ಆಗುತ್ತಿದ್ದಂತೆಯೇ ಪಿಂಚಣಿ ಮಂಜೂರು ಮಾಡುವುದು ಹಾಗೂ ನಿಧನ ಹೊಂದಿದ ಬಳಿಕ ಸ್ವಯಂಚಾಲಿತವಾಗಿ ಪಿಂಚಣಿ ಸ್ಥಗಿತವಾಗುವ ಹಾಗೆ ಹೊಸ ವ್ಯವಸ್ಥೆ ರೂಪಿಸಲಾಗುವುದು. ಇದಕ್ಕಾಗಿ ತಂತ್ರಾಂಶ ಅಭಿವೃದ್ಧಿಪಡಿಸಬೇಕಾಗುತ್ತದೆ. ಆದಷ್ಟು ಬೇಗ ಇದನ್ನು ಜಾರಿ ಮಾಡುತ್ತೇವೆ ಎಂದು ಮನೋಜ್ಕುಮಾರ್ ಮೀನಾ ತಿಳಿಸಿದರು. ಈ ಹಿಂದೆ ಒತ್ತಡಕ್ಕೆ ಮಣಿದು ಅಥವಾ ದಾಖಲೆಗಳನ್ನು ಪರಿಶೀಲಿಸದೆ ಪಿಂಚಣಿ ಮಂಜೂರು ಮಾಡಿರುವುದರಿಂದ ಅನರ್ಹರು ಲಾಭ ಪಡೆಯುತ್ತಿ ದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಇರಬಾರದು ಎಂಬ ಉದ್ದೇಶ ದಿಂದ ಪಿಂಚಣಿ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುವುದು ಎಂದರು.















