ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರ 33ನೇ ಚಾತುರ್ಮಾಸ್ಯ ಸಮಾಪ್ತಿ

ಬ್ರಹ್ಮಾವರ: ಇಲ್ಲಿನ ನೀಲಾವರ ಗೋಶಾಲೆಯಲ್ಲಿರುವ ತಮ್ಮ ಶಾಖಾ ಮಠದಲ್ಲಿ 33ನೇ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿದ್ದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ವ್ರತ ಸಮಾಪ್ತಿಗೊಳಿಸಿದರು.
ಬೆಳಿಗ್ಗೆ ಪಟ್ಟದೇವರಾದ ಶ್ರೀರಾಮ ವಿಠಲ ದೇವರಿಗೆ ಮಹಾಪೂಜೆ ನೆರವೇರಿಸಿ, ಬಳಿಕ ಗೋಶಾಲೆಯ ಪುಷ್ಕರಿಣಿಯಲ್ಲಿ ಚಾತುರ್ಮಾಸ್ಯ ಮೃತ್ತಿಕಾ ವಿಸರ್ಜನೆ ಮಾಡಿದರು.
ಮಧ್ಯಾಹ್ನ ಗೋಶಾಲೆಯಿಂದ ತಮ್ಮ ಶಿಷ್ಯರೊಡಗೂಡಿ ಮಹಿಳೆಯರ  ಭಜನೆ, ವಿದ್ಯಾರ್ಥಿಗಳ ಮಂತ್ರಘೋಷಗಳೊಂದಿಗೆ  ಸಮೀಪದ ಸೀತಾನದಿ ತೀರದವರೆಗೆ ಕುದುರೆ ಸವಾರಿ ನಡೆಸಿದರು.
ಸೀತಾನದಿಗೆ ಸೀಯಾಳ, ಪುಷ್ಪ ಅರ್ಪಣೆ  ಸಹಿತ ಮಂಗಳಾರತಿ ಬೆಳಗಿದರು. ಬಳಿಕ ಸ್ಥಳೀಯರಾದ ವಿಠಲ‌ ಪೂಜಾರಿ ಅವರು ತಮ್ಮ‌ದೋಣಿಯನ್ನು ಅಲಂಕರಿಸಿ ಸ್ವಾಮೀಜಿಯವರನ್ನು ಶ್ರೀರಾಮದೇವರ ಸಹಿತ ಕುಳ್ಳಿರಿಸಿ ನದಿಯ ಆಚೆ ದಡದ ವರೆಗೆ ಕರೆದುಕೊಂಡು ಹೋಗಿ ಮರಳಿದರು. ಶ್ರೀಗಳು ದೋಣಿಯಲ್ಲಿ ಕುಳಿತು ಸಾಂಕೇತಿಕವಾಗಿ ಸೀಮೋಲ್ಲಂಘನ ನಡೆಸಿದರು. ಮರಳಿ ಬಂದು ಶ್ರೀಗಳು ಗ್ರಾಮದೇವತೆ ಮಹಿಷಮರ್ದಿನಿ ದೇವಳಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ದೇವಳದ ಪರವಾಗಿ ಆಡಳಿತ ಮಂಡಳಿ ಮುಖ್ಯಸ್ಥ ರಘುರಾಮ‌ ಮಧ್ಯಸ್ಥ ಹಾಗೂ ಪ್ರಧಾನ ಅರ್ಚಕ ಕೃಷ್ಣ ಅಡಿಗ ಮೊದಲಾದವರು ಶ್ರೀಗಳನ್ನು ಬರಮಾಡಿಕೊಂಡು, ದೇವಳದ ಗೌರವವನ್ನು ಅರ್ಪಿಸಿದರು.
ಅಲ್ಲಿಂದ ಉಡುಪಿಗೆ ತೆರಳಿ ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆಯುವುದರೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿಗೊಂಡಿತು. ಇದೇ ಸಂದರ್ಭ  ಬಾರ್ಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಹವ್ಯಾಸಿ ಯಕ್ಷಗಾನ ಸಂಘದ ಕಲಾವಿದರು ದಂಡಕ ದಮನ ಯಕ್ಷಗಾನ ಪ್ರಸಂಗದ ತಾಳಮದ್ದಲೆ ನಡೆಸಿಕೊಟ್ಟರು.
ಅನೇಕ ವೈಶಿಷ್ಟ್ಯಗಳ ಚಾತುರ್ಮಾಸ್ಯ: 
  • ವಿಶ್ವೇಶತೀರ್ಥ ಶ್ರೀಪಾದರ ಕಾಲಾನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಶ್ರೀಗಳ ಮೊದಲ ಚಾತುರ್ಮಾಸ್ಯ
  • ಸಾಮಾನ್ಯವಾಗಿ ಉಡುಪಿಯ ಮಠಾಧೀಶರು ಉಡುಪಿಯಿಂದ ಉತ್ತರದ ಬ್ರಹ್ಮಾವರದ ಆಸುಪಾಸಿನ ಈ ಪ್ರದೇಶಗಳಲ್ಲಿ ( ಮುಂದೆ ಶಿರಸಿಯ ಸೋಂದಾದಲ್ಲಿ ನಡೆಸುತ್ತಾರೆ)  ಚಾತುರ್ಮಾಸ್ಯ ವ್ರತ ನಡೆಸಿಲ್ಲ. ಇದೇ ಮೊದಲ ಬಾರಿಗೆ ಅದು ನಡೆದಿದೆ.
  • ಅಯೋಧ್ಯೆ ಶ್ರೀ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾಗಿ ಶ್ರೀಗಳ ಮೊದಲ ಚಾತುರ್ಮಾಸ್ಯ .
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಳೆದ ತಿಂಗಳು  ನಡೆದ ಸಂದರ್ಭದಲ್ಲಿ ನೀಲಾವರದಲ್ಲಿ ಶ್ರೀಗಳು ಶ್ರೀರಾಮದೇವರ ವಿಶೇಷ ಆರಾಧನೆ ನಡೆಸಿದ್ದು‌ ವಿಶೇಷ.