ವಿಜಯಪುರ: ಬಿಜೆಪಿ ಮತ್ತು ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿವೆ ಎಂಬ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ವಿಜಯಪುರ ನಗರದ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯತೀಂದ್ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಯಾರೋ ಸಿದ್ಧತೆ ನಡೆಸುತ್ತಿದ್ದಾರೋ ಏನೋ. ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಕೊಡುತ್ತಿದ್ದಾರೆ. ಅವರ ಹೇಳಿಕೆ ಸರಿಯಲ್ಲ. ಭಾರತ ಹಿಂದಿನಿಂದಲೂ ಹಿಂದೂ ರಾಷ್ಟ್ರವಾಗಿ ಇದ್ದು, ಜಾತಿ ಧರ್ಮ ಪಂಗಡ ಎಂದು ಮೀಸಲಿರದೆ ಎಲ್ಲರನ್ನೂ ಅಪ್ಪಿ ಒಪ್ಪಿಕೊಂಡ ದೇಶ” ಎಂದು ಶ್ರೀಗಳು ಹೇಳಿದ್ದಾರೆ.
ಮತ್ತೆ ಗೋಧ್ರಾದಂಥ ಘಟನೆ ನಡೆಯಬಹುದು ಎಂಬ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂತಹ ಘಟನೆ ನಡೆಯುವ ಬಗ್ಗೆ ಸುಳಿವಿದ್ದರೆ ಪೊಲೀಸ್ ಇಲಾಖೆಗೆ ಹೋಗಿ ಯಾಕೆ ಹೇಳುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ವಿಧ್ವಂಸಕ ಕೃತ್ಯ ಮಾಡಲು ಹೊರಟಿರುವವರ ಬಗ್ಗೆ ಕೇಳಿದರೆ ಹೇಳುತ್ತೇವೆ ಎಂಬ ಹೇಳಿಕೆ ಸರಿಯಲ್ಲ. ಹಾಗೆ ಹೇಳುವುದು ವಿಧ್ವಂಸಕ ಕೃತ್ಯ ನಡೆಯಲಿ ಎಂಬ ಅರ್ಥ ಕೊಡುತ್ತದೆ. ಹಾಗಾದರೆ ಇವರು ಪ್ರಜೆಗಳನ್ನು ರಕ್ಷಣೆ ಮಾಡುತ್ತಿದ್ದಾರೋ ಅಥವಾ ವಿಧ್ವಂಸಕ ಕೃತ್ಯಗಳನ್ನ ಮಾಡುವವರನ್ನು ರಕ್ಷಣೆ ಮಾಡುತ್ತಿದ್ದಾರೋ? ಜವಾಬ್ದಾರಿ ಸ್ಥಾನದಲ್ಲಿರುವವರು ಇಂಥ ಮಾತನ್ನಾಡಬಾರದು. ಹಾಗಾದ್ರೆ ಇಲ್ಲಿ ಭಯೋತ್ಪಾದಕರಾಗಿದ್ದು ಯಾರು ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ.
ಹೀಗೆ ಮಾತನಾಡುವ ಇವರೇ ಭಯೋತ್ಪಾದಕರು. ರಾಮ ಭಕ್ತರನ್ನ ಹೆದರಿಸುವ ಭರದಲ್ಲಿ ದೇಶವನ್ನೇ ಹೆದರಿಸುತ್ತಿದ್ದಾರೆ. ಈ ರೀತಿ ಯಾರು ಕೂಡ ಮಾತನಾಡಬಾರದು. ಕೃತ್ಯಗಳ ಮಾಹಿತಿ ಇದ್ದರೆ ಅದನ್ನು ಪರಿಹರಿಸುವ ಕೆಲಸ ಮಾಡಬೇಕು ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.