ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಜನರಿಗೆ ಮೊದಲಿದ್ದಷ್ಟು ನಿರೀಕ್ಷೆ ಇಲ್ಲ : ಪೇಜಾವರ ಶ್ರೀ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜನರಿಗೆ ಮೊದಲಿದ್ದಷ್ಟು ನಿರೀಕ್ಷೆ ಈಗ ಇಲ್ಲ. ದೇಶದಲ್ಲಿ ಜನರು ನಿರೀಕ್ಷಿಸಿದಷ್ಟು ಕೆಲಸ ಆಗಿಲ್ಲ. ನೋಟು ರದ್ದತಿಯ ಫಲ‌ ಜನಸಾಮಾನ್ಯರಿಗೆ ಸಿಕ್ಕಿಲ್ಲ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯನ್ನು ಅವರು ಮಾತನಾಡಿದರು.

ಪಂಚರಾಜ್ಯಗಳ ಫಲಿತಾಂಶ ಮೋದಿಗೆ ಎಚ್ಚರಿಕೆಯ ಗಂಟೆ. ಹಾಗಾಗಿ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಆದ್ಯತೆ ಕೊಡಲಿ. ಮಂದಿರ ನಿರ್ಮಾಣವಾದರೆ ಹಿಂದೂ ಮತದಾರರ ಉತ್ಸಾಹ ಹೆಚ್ಚಾಗಬಹುದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ಎನ್ ಡಿಎ ಮೈತ್ರಿಕೂಟ ಉಳಿಸಲು ಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆಯೂ ಸರಿಯಬಹುದು. ಹಾಗಾಗಿ ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಬೇಕು. ಇತರೆ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು.

ಎಡೆಸ್ನಾನ ರದ್ದು ಸ್ವಾಗತಾರ್ಹ:

ಮಡೆಸ್ನಾನದ ಬದಲಾಗಿ ಕೃಷ್ಣಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದ ಎಡೆಸ್ನಾನ ಪದ್ದತಿಯನ್ನು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಪಾದರು ರದ್ದು ಪಡಿಸಿದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ದೇವಸ್ಥಾನದಲ್ಲಿ ಮಡೆಸ್ನಾನ – ಎಡೆಸ್ನಾನ ಅನಿವಾರ್ಯ ಅಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎಡೆಸ್ನಾನಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹಾಗಾಗಿ ಘರ್ಷಣೆಗೆ ಎಡೆಮಾಡುವ ಆಚರಣೆ ನಮಗೆ ಬೇಡ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ.

ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನೆರವೇರಿದರೆ ಅಷ್ಟೇ ಸಾಕು. ಜಾತಿಯ ಹೆಸರಲ್ಲಿ ವಿರೋಧ ಬಂದರೆ ಅದು ಸಂಘರ್ಷಕ್ಕೆ ಕಾರಣ ಆಗುತ್ತದೆ. ಈ ನಿಟ್ಟಿನಲ್ಲಿ ಪಲಿಮಾರು ಶ್ರೀಗಳು ಕೈಗೊಂಡ ತೀರ್ಮಾನ ಉತ್ತಮವಾಗಿದೆ ಎಂದು ಶ್ಲಾಘಿಸಿದರು.