ನನಗೆ ಎಲ್ಲಾ ಪಕ್ಷಗಳು ಸಮಾನ :ಪೇಜಾವರ ಶ್ರೀ

ಉಡುಪಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಹೋರಾಟ ಮಾಡಬೇಕಿತ್ತು.  ಇದರಿಂದ ವಿಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಲು  ಸಾಧ್ಯವಾಗುತ್ತಿತ್ತು.  ಆದರೆ ಅದು ಆಗಿಲ್ಲ. ಬಿಜೆಪಿ ಕೋಮುವಾದಿ ಪಕ್ಷ,  ಅದನ್ನು ಸೋಲಿಸಬೇಕೆಂದು ಎಲ್ಲಾ ಪಕ್ಷಗಳು ಒಂದಾದವು. ನನಗೆ ದೇಶದ ಎಲ್ಲಾ ಪಕ್ಷಗಳು ಸಮಾನ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀಕೃಷ್ಣಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಅವರು ಮಾತನಾಡಿದರು.
 ವೇದವ್ಯಾಸರೇ ರಾಷ್ಟ್ರಪಿತರು ಎಂಬುವುದು ನನ್ನ ಅಭಿಪ್ರಾಯ.ಭಾರತ ಮಹಾತ್ಮ ಗಾಂಧೀಜಿ ಅವರಿಂದ ಆರಂಭ ಆದದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಆವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತ್ವ ಎಲ್ಲವೂ ಎಚ್ಚರವಾಗಿದೆ ಎಂದವರು ಹೇಳಿದರು.
 
ನಾಥೂರಾಮ್‌ ಗೋಡ್ಸೆ ರಾಷ್ಟ್ರಭಕ್ತ ,ಹೇಳಿಕೆಗೆ ಅಸಮಾಧಾನ:
ಮಹಾತ್ಮಾಗಾಂಧಿ ಬಗ್ಗೆ ನನಗೆ ಬಹಳ ಗೌರವ ಇದೆ. ನಾಥೂರಾಮ್‌ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದಿರುವುದು ರಾಷ್ಟ್ರಕ್ಕೆ ಮಾಡಿದ ದೊಡ್ಡ ಅವಮಾನ. ಇಂತಹ ಹೇಳಿಕೆ ಕೊಟ್ಟವರ ಬಗ್ಗೆ ನನಗೆ ಅಸಮಾಧಾನ ಇದೆ ಎಂದರು.
 
ಅಭಿವೃದ್ದಿಯ ಬಗ್ಗೆ ಚರ್ಚೆಯಾಗಲಿ:
ಚುನಾವಣೆಯಲ್ಲಿ  ಅಭಿವೃದ್ಧಿ ವಿಚಾರ  ಚರ್ಚೆಯಾಗಿಲ್ಲ.ಧರ್ಮದ  ವಿಚಾರ ತೆಗೆದರೆ ಬಹು ಸಂಖ್ಯಾತರಾದ ಹಿಂದೂಗಳು ಜಾಗೃತರಾಗುತ್ತಾರೆ ಎಂದರಿತ ಪಕ್ಷ ಅದನ್ನೇ ಶಸ್ತ್ರವನ್ನಾಗಿಸಿತು.  ಇನ್ನು ಮುಂದಾದರೂ ದೇಶದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆಯಾಗಲಿ ಎಂದು ತಿಳಿಸಿದರು.
ಪ್ರಧಾನಿ ಮೋದಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಿದೆ ಅದು ಸಾಧ್ಯವಾಗಲಿ ಎಂದವರು ಹೇಳಿದರು.