ಅಕ್ರಮ ಗೋಸಾಗಾಟ ತಡೆದವರ ಮೇಲೆ ವಾಹನ ಚಲಾಯಿಸಿದ ದುರ್ಘಟನೆಗೆ ಪೇಜಾವರ ಶ್ರೀ ಖಂಡನೆ

ಉಡುಪಿ: ತೀರ್ಥಹಳ್ಳಿಯ ಬಿಜ್ಜವಳ್ಳಿ ಸಮೀಪ ಅಕ್ರಮ ಗೋಸಾಗಾಟವನ್ನು ತಡೆಯಲೆತ್ನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತ ರ ಮೇಲೆ ವಾಹನ ಚಲಾಯಿಸಿ ಮಾರಣಾಂತಿಕ ದುಷ್ಕೃತ್ಯ ನಡೆಸಿರುವ ಘಟನೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಿಜಕ್ಕೂ ಖಂಡನೀಯ. ಗೋರಕ್ಷಣೆಯ ಕಾರ್ಯಕ್ಕೆ ಈ ರೀತಿ ಸವಾಲೆಸೆಯುವ ದುರುಳರ ವಿರುದ್ಧ ಸರ್ಕಾರ ಗಂಭೀರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗೋಹತ್ಯಾನಿಷೇಧ ಕಾನೂನು ಕೇವಲ ಜಾರಿಗೆ ತಂದು ಪ್ರಯೋಜನವಿಲ್ಲ. ಅದರ ಪರಿಣಾಮಕಾರಿ ಅನುಷ್ಠಾನ ಆಗಬೇಕು. ಸರ್ಕಾರಗಳು ಈ ಬಗ್ಗೆ ಪೂರ್ಣ ಇಚ್ಛಾಶಕ್ತಿ ತೋರಬೇಕು. ಇತ್ತೀಚಿನ ದಿನಗಳಲ್ಲಂತೂ ಗೋಹತ್ಯೆ, ಅಕ್ರಮ ಗೋಸಾಗಾಟಗಳು ಯಾವುದೇ ಮುಲಾಜಿಲ್ಲದೇ ನಡೆಯುತ್ತಿರುವುದು ತೀರಾ ಆತಂಕಕಾರಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಗೋವಿನ ಸಂಕುಲ ಉಳಿಸಲು ಇಡೀ ಸಮಾಜ ಕಂಕಣಬದ್ಧರಾಗಲೇಬೇಕು. ಬೀಡಾಡಿ ದನಗಳನ್ನು ರಕ್ಷಿಸಲು ಸರ್ಕಾರ ತುರ್ತಾಗಿ ಮುಂದಾಗಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.

ಬಿಜ್ಜವಳ್ಳಿ ದುರ್ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸಾವೆಚ್ಚವನ್ನು ಸರ್ಕಾರ ನೋಡಿಕೊಳ್ಳಬೇಕು. ಈ ಕಾರ್ಯಕರ್ತರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ .