ಪೇಜಾವರ ಶ್ರೀ ದೌರ್ಬಲ್ಯರಲ್ಲ, ಪ್ರಾಬಲ್ಯರು:ವಿದ್ಯಾಧೀಶ ಸ್ವಾಮೀಜಿ

 ಉಡುಪಿ: ಪೇಜಾವರ ಶ್ರೀಗಳ ಶರೀರದಲ್ಲಿ  ದೌರ್ಬಲ್ಯವಿರಬಹುದು. ಆದರೆ ಅಂತರಂಗದಲ್ಲಿ ದೌರ್ಬಲ್ಯವಿಲ್ಲ.  ಅದೇ ಅವರ ಪ್ರಾಬಲ್ಯ ಎಂದು  ಪರ್ಯಾಯ ಪಲಿಮಾರು ಮಠದ
ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶನಿವಾರ ನಡೆದ ತಮ್ಮ ನಾಲ್ಕನೇ ಮತ್ತು
ಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತು ಹಿರಿಯ ಛಾಯಾಚಿತ್ರ ಪತ್ರಕರ್ತ
ಆಸ್ಟ್ರೋ ಮೋಹನ್‌ ರಚಿಸಿರುವ ‘ಎ ಡೇ ವಿತ್‌ದ ಸೇಂಟ್‌ ದೆನ್‌ ಆ್ಯಂಡ್‌ ನೌ’ ಎಂಬ
ವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟದ ಬಿಡುಗಡೆ ಸಮಾರಂಭದಲ್ಲಿ  ಅವರು ಮಾತನಾಡಿದರು.  ಯಾವುದೇ ಸಭೆ, ಸಮಾರಂಭಗಳಲ್ಲಿ ಪೇಜಾವರ ಶ್ರೀಗಳು ಇಲ್ಲದಿದ್ದರೆ,     ಆ ಸಭೆಯಲ್ಲಿ ಕೊರತೆ ಎದ್ದು ಕಾಣುತ್ತದೆ. ಶ್ರೀಗಳು ಐದು ನಿಮಿಷ ಬಂದು ಹೋದರೂ ಆ ಸಭೆಗೆ ಪೂರ್ಣತೆ ಬರುತ್ತದೆ ಎಂದವರು ಹೇಳಿದರು. 

ನನ್ನ ದೌರ್ಬಲ್ಯದ ಆತ್ಮವಿಮರ್ಶೆ ಮಾಡುವೆ:
ನನ್ನ  ಕೊರತೆ, ದೌರ್ಬಲ್ಯದ ಕುರಿತು ಅರಿವು ನನಗಿದೆ. ಆದರೂ ನನಗೇ ಗೊತ್ತಿಲ್ಲದೇ  ಎಷ್ಟೋ ಸಂಗತಿಗಳು ನಡೆಯುತ್ತದೆ. ಅಲ್ಲಿ ನನ್ನ ದೌರ್ಬಲ್ಯವೂ  ನನಗೆ ಗೊತ್ತಿಲ್ಲದೆ ಬೇರೆಯವರಿಗೆ ಕಂಡಿರಲೂ ಸಾಕು ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವೆ ಎಂದು  ಪೇಜಾವರ ಮಠದ
ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಒಬ್ಬ ವ್ಯಕ್ತಿಗೆ ಮೂರು ಬಗೆಯ ವ್ಯಕ್ತಿತ್ವ ಇರುತ್ತದೆ. ಜನರು ನೋಡುವ ವ್ಯಕ್ತಿತ್ವ, ತಾನು
ತನ್ನನ್ನು ನೋಡುವ ವ್ಯಕ್ತಿತ್ವ, ನಿಜವಾದ ವ್ಯಕ್ತಿತ್ವ. ಇದರಲ್ಲಿ ಯಾವುದು ನಮ್ಮಲ್ಲಿ
ಇದೆ.  ಯಾವುದು ಇಲ್ಲ ಎಂಬುವುದನ್ನು ಅರಿತುಕೊಳ್ಳುವುದು ಕಷ್ಟವಾಗುತ್ತದೆ ಎಂದರು.
ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟು ಈ ಕೃತಿ ಹೊರತಂದ್ದು ಸಂತೋಷ ತಂದಿದೆ.
ಅದಕ್ಕೆ ಬೇಕಾದ ಅಹರ್ತೆ ನನ್ನಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಎಂದರು.
ಚಿತ್ರ ಸಂಪುಟವನ್ನು ಬಿಡುಗಡೆಗೊಳಿಸಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ
ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಮಾತನಾಡಿ, ಪೇಜಾವರ ಶ್ರೀಪಾದರಿಗೆ
ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ವೈಯಕ್ತಿಕ ಮುಖಗಳಿವೆ. ಆ ಮುಖಗಳನ್ನು
ಆಸ್ಟ್ರೋ ಮೋಹನ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ  ಎಂದರು.
ಈ ಸಂದರ್ಭದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಕಮಲದ ಹೂವಿನ ಮೇಲೆ ಕೂರಿಸಿ ಪುಷ್ಪಾರ್ಚಣೆ ಸಲ್ಲಿಸಲಾಯಿತು.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್‌. ಪೈ, ಮಣಿಪಾಲ ಉನ್ನತ
ಶಿಕ್ಷಣ ಅಕಾಡೆಮಿಯ ಸಹಕುಲಾಧಿಪತಿ ಡಾ. ಎಚ್‌.ಎಸ್‌. ಬಲ್ಲಾಳ್‌, ಮೂಡುಬಿದಿರೆ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಂ. ಮೋಹನ್‌ ಆಳ್ವ, ಮಣಿಪಾಲ್‌
ಮೀಡಿಯಾ ಗ್ರೂಪ್‌ನ ಸಿಇಒ ವಿನೋದ್‌ ಕುಮಾರ್‌ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ಭೂತರಾಜ ಪ್ರಕಾಶನ ಪ್ರಕಾಶಕಿ ಪ್ರವೀಣಾ ಮೋಹನ್‌ ಉಪಸ್ಥಿತರಿದ್ದರು.
ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ ಪ್ರಾಸ್ತಾವಿಕವಾಗಿ ಮಾತನಾಡಿ
ಸ್ವಾಗತಿಸಿದರು.  ಜನಾರ್ದನ ಕೊಡವೂರು ವಂದಿಸಿದರು. ವಾಸುದೇವ ಭಟ್‌ ನಿರೂಪಿಸಿದರು.