ನವಿಲುಗಳ ಕಣಿವೆಯೆಂದೆ ಪ್ರಖ್ಯಾತವಾಗಿದೆ ಭಾರತದ ಈ ಹಳ್ಳಿ: ಅಜ್ಜನ ಕನಸನ್ನು ಜೀವಂತವಾಗಿರಿಸಿದ ಮೊಮ್ಮಗ

ಭಾರತದ ಯಾವುದೇ ಒಂದು ಹಳ್ಳಿಯಂತೆಯೆ ಇದೂ ಕೂಡಾ ಒಂದು ಹಳ್ಳಿ. ಹಸಿರು ಹೊಲಗಳ ಮಧ್ಯೆ ಹಾದು ಹೋಗಿರುವ ಕೆಂಪು ಮಣ್ಣಿನ ರಸ್ತೆಯ ಈ ಹಳ್ಳಿಯಲ್ಲಿ ನೋಡಲು ವಿಶೇಷವಾದದ್ದು ಏನೂ ಇಲ್ಲ. ಆದರೂ ಇದೆ. ಇಲ್ಲೊಂದು ಒಂಟಿ ಗುಡಿಸಲಿದೆ ಮತ್ತು ಅಲ್ಲಿರುವ ಒಬ್ಬ ವ್ಯಕ್ತಿ ವಾಸಿಸುತ್ತಾರೆ ಮತ್ತು ಆತ ಕರೆದ ತಕ್ಷಣ ಅಲ್ಲೇ ಪಕ್ಕದಲ್ಲಿ ಆಡ್ಡಾಡಿಕೊಂಡಿರುವ ನವಿಲುಗಳೆಲ್ಲಾ ಓಡೋಡಿ ಬರುತ್ತವೆ! ಆಗ ಆ ವ್ಯಕ್ತಿ
ಸಂತೋಷದಿಂದ ನವಿಲುಗಳಿಗೆ ಆಹಾರ ನೀಡುತ್ತಾರೆ. ನವಿಲುಗಳೂ ಯಾವುದೇ ಭಯವಿಲ್ಲದೆ ಕಾಳುಗಳನ್ನು ಹೆಕ್ಕಿ ತಿನ್ನುತ್ತವೆ. ಇದು ಭಾರತದ ಒಡಿಸಾ ರಾಜ್ಯದಲ್ಲಿರುವ ನಾರಾಜ್‌ ಎನ್ನುವ ಹಳ್ಳಿಯ ಕಥೆ.

ನಾರಾಜ್ ನ ಈ ಒಂದು ಸಣ್ಣ ಹಳ್ಳಿಯ ಕಾಡಿನಲ್ಲಿ 163 ನವಿಲುಗಳು ವಾಸಿಸುತ್ತವೆ ಮತ್ತು ಇದು ನವಿಲುಗಳ ಕಣಿವೆಯೆಂದೆ ಪ್ರಖ್ಯಾತವಾಗಿದೆ. ಈ ಹಳ್ಳಿಯ ನವಿಲು ಕಣಿವೆಯನ್ನು ಕಣ್ಣಾರೆ ಕಾಣಲು ಪ್ರವಾಸಿಗರ ದಂಡೇ ಭೇಟಿ ನೀಡುತ್ತದೆ. ಬೆಳಗ್ಗಿನ ಜಾವ 5.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಭೇಟಿ ನೀಡುವ ಪ್ರಶಸ್ತ ಸಮಯವಾಗಿದೆ.

Image

ಸ್ಥಳೀಯರ ಪ್ರಕಾರ, 1999 ರಲ್ಲಿ, ಒಡಿಶಾದಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದಾಗ ಪನ್ನು ಬೆಹೆರಾ(ಮರಣಿಸಿದ್ದಾರೆ) ಕೆಲವು ನವಿಲುಗಳು ಸಂಕಷ್ಟದಲ್ಲಿರುವುದನ್ನು ಕಂಡರು. ಅವರು ಆ ನವಿಲುಗಳ ಶುಶ್ರೂಷೆ ಮಾಡಿ ಅವುಗಳಿಗೆ ಆಹಾರ ನೀಡಲು ತೊಡಗಿದರು. ಇದು ನಿತ್ಯದ ವ್ಯವಹಾರವಾದಾಗ ಶೀಘ್ರದಲ್ಲೇ ನವಿಲುಗಳೂ ಅವರೊಂದಿಗೆ ಸ್ನೇಹ ಬೆಳೆಸಿದವು. ವರ್ಷಗಳೆದಂತೆ ಹೆಚ್ಚು ಹೆಚ್ಚು ನವಿಲುಗಳು ಬಂದು ಸೇರಿಕೊಂಡವು. ಆಗಲೂ ಪನ್ನು ಅವುಗಳಿಗೆ ಆಹಾರವನ್ನು ನೀಡಿದರು. ರಾಜ್ಯ ಪೊಲೀಸ್ ಉದ್ಯೋಗಿಯಾಗಿ ಗಳಿಸಿದ ಸಂಬಳವನ್ನು ಮತ್ತು ಅವರ ಪಿಂಚಣಿ ಎಲ್ಲವನ್ನೂ ನವಿಲುಗಳಿಗಾಗಿ ಬಳಸಿದರು. ಅವರ ಈ ನವಿಲು ಪ್ರೀತಿಯಿಂದಾಗಿ ಜನರು ಅವರನ್ನು ‘ನವಿಲು ಮನುಷ್ಯ’ ಎಂದು ಕರೆಯಲು ಪ್ರಾರಂಭಿಸಿದರು. ಅವರ ನಿಧನಾನಂತರ ಅವರ ಮಗ ನವಿಲುಗಳಿಗೆ ಆಹಾರ ಉಣಿಸುತ್ತಿದ್ದರು.

ಈಗ ಅವರ ಮೊಮ್ಮಗ ಕನ್ಹು ಬೆಹರಾ ಅಜ್ಜನ ಈ ಪರಂಪರೆಯನ್ನು ಮುಂದುವರೆಸಿದ್ದಾರೆ. ಅಜ್ಜನ ಕನಸನ್ನು ಜೀವಂತವಾಗಿರಿಸಲು ಅವರು ತಮ್ಮ ಓದು ಮತ್ತು ಉದ್ಯೋಗವನ್ನೇ ತ್ಯಾಗ ಮಾಡಿದ್ದಾರೆ ಎನ್ನಲಾಗಿದೆ. ಪ್ರಕೃತಿ ಮತ್ತು ಮನುಷ್ಯ ಬೇರೆ ಬೇರೆಯಲ್ಲ, ಪ್ರಕೃತಿಯೊಂದಿಗೆ ನಾವು ಬೆರೆತಾಗ, ಪ್ರಕೃತಿಯೂ ನಮ್ಮ ಜೊತೆ ಬೆರೆಯುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎನಿಸಿದೆ.