ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಅವರು ತಮ್ಮ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಉತ್ತರಿಸಿದರು. ಕಳೆದ ಎರಡು ದಿನಗಳಿಂದ, ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ಬಗ್ಗೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಾಯಕರು ಭಾರೀ ಚರ್ಚೆಗಳನ್ನು ಮಾಡುತ್ತಿದ್ದು, ಅವಿಶ್ವಾಸ ಮಂಡನೆಯ ಧ್ವನಿ ಮತದ ದಿನವಾದ ಗುರುವಾರದಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ಆದರೆ, ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಪ್ರಧಾನಿಯವರ ಭಾಷಣವನ್ನು ಪೂರ್ತಿ ಕೇಳದೆ ಸಂಸತ್ ನಿಂದ ನಿರ್ಗಮಿಸಿದವು.
ಮಣಿಪುರ ಕುರಿತು ಮಾತನಾಡಿದ ಪ್ರಧಾನಿ, “ಮಣಿಪುರದಲ್ಲಿ ಮಹಿಳೆಯರ ವಿರುದ್ಧದ ಗಂಭೀರ ಅಪರಾಧ ನಡೆದಿದೆ ಮತ್ತು ಇದು ಅಕ್ಷಮ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ನಾನು ದೇಶದ ಜನರಿಗೆ ಶಾಂತಿಯ ಭರವಸೆ ನೀಡಲು ಬಯಸುತ್ತೇನೆ. ಶಾಂತಿ ಪುನಃಸ್ಥಾಪನೆಯಾಗುತ್ತದೆ ಮತ್ತು ಮಣಿಪುರವು ಹೊಸ ಆತ್ಮಸ್ಥೈರ್ಯದೊಂದಿಗೆ ಮುನ್ನಡೆಯುತ್ತದೆ. ನಾನು ಮಣಿಪುರದ ಜನರನ್ನು ಒತ್ತಾಯಿಸುತ್ತೇನೆ ಮತ್ತು ಮಣಿಪುರದ ಮಹಿಳೆಯರಿಗೆ ದೇಶವು ಅವರೊಂದಿಗೆ ನಿಂತಿದೆ ಎಂದು ಹೇಳಲು ಬಯಸುತ್ತೇನೆ. ನಾವು ಒಟ್ಟಾಗಿ ಈ ಸವಾಲಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಮತ್ತು ಮತ್ತೊಮ್ಮೆ ಅಲ್ಲಿ ಶಾಂತಿಯನ್ನು ಪುನಃಸ್ಥಾಪಿಸುತ್ತೇವೆ” ಎಂದರು.
ಕಾಂಗ್ರೆಸ್ ಅನ್ನು ಗುರಿಯಾಗಿಸಿದ ಪ್ರಧಾನಿ, “ನೀವು (ಕಾಂಗ್ರೆಸ್) ಈಶಾನ್ಯ ರಾಜ್ಯದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಎಂದಿಗೂ ಪ್ರಯತ್ನಿಸಲಿಲ್ಲ. ನಾನು 50 ಬಾರಿ ಭೇಟಿ ನೀಡಿದ್ದೇನೆ. ಇದು ಕೇವಲ ಅಂಕಿ ಅಂಶ ಅಲ್ಲ, ಇದು ಈಶಾನ್ಯದ ಕಡೆಗೆ ನನ್ನ ಸಮರ್ಪಣೆಯಾಗಿದೆ” ಎಂದು ಹೇಳಿದರು.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ನ ಭ್ರಷ್ಟಾಚಾರ, ಪರಿವಾರವಾದ ಮತ್ತು ಸ್ವಾತಂತ್ರ್ಯೋತ್ತರ ಕಾಲದಿಂದಲೂ ದೇಶವನ್ನು ವಿಭಾಜನೆಗೆ ತಳ್ಳಿ, ಅರ್ಥಿಕತೆಯನ್ನು ಹಳ್ಳಹಿಡಿಸಿದ ಬಗ್ಗೆ ಹರಿಹಾಯ್ದ ಮೋದಿ, ಕಾಂಗ್ರೆಸ್ 2018 ರಲ್ಲಿಯೂ ಅವಿಶ್ವಾಸ ಮಂಡಿಸಿತ್ತು, ಆಗ 2023 ರಲ್ಲಿ ಮತ್ತೊಮ್ಮೆ ಅವಿಶ್ವಾಸ ಮಂಡಿಸಿ ಎಂದಿದ್ದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ವಿರೋಧಿಸುವಂತಹ ಯಾವುದೇ ವಿಚಾರಗಳನ್ನು ಮಂಡಿಸಿಲ್ಲ. ವಿರೋಧಿಸುವ ವಿಚಾರದಲ್ಲಿ ಕಳೆದ ಐದು ವರ್ಷಗಳಲ್ಲಿ ನಾವೀನ್ಯತೆಯನ್ನೂ ಕಾಂಗ್ರೆಸ್ ಕಂಡುಕೊಂಡಿಲ್ಲ. ಮುಂದೆ 2028 ರಲ್ಲಿ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶ ನೀಡುತ್ತೇವೆ ಆಗಲಾದರೂ ಸರಿಯಾಗಿ ತಯಾರಾಗಿ ಬನ್ನಿ ಎಂದು ಕಾಲೆಳೆದರು.
ಮೋದಿ ಸರ್ಕಾರದ ವಿರುದ್ದ ಮಂಡಿಸಲಾಗಿದ್ದ ಅವಿಶ್ವಾಸ ಮಂಡನೆಯನ್ನು ಸಭಾಧ್ಯಕ್ಷ ಓಮ್ ಬಿರ್ಲಾ ಧ್ವನಿ ಮತಕ್ಕೆ ಹಾಕಿದರು ಮತ್ತು ಅವಿಶ್ವಾಸ ಮಂಡನೆಯು ಸರ್ವಾನುಮತದಿಂದ ತಿರಸ್ಕೃತವಾಯಿತು.