ಧಾರ್ಮಿಕ ತಳಹದಿ ಭದ್ರಗೊಂಡರೆ ಜಗತ್ತಿಗೆ ಶಾಂತಿ: ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ವಿಶ್ವವಲ್ಲಭ ಶ್ರೀಗಳ ಆಶಯ

ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮೇ.22 ರಂದು ಬ್ರಹ್ಮಕುಂಭಾಭಿಷೇಕ ರಾಶಿ ಪೂಜೆ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು.

ದೇವಾಲಯಗಳ ಸಾನ್ನಿಧ್ಯ ಶಕ್ತಿಯ ಚೈತನ್ಯ ವೃದ್ಧಿಯಿಂದ ಧಾರ್ಮಿಕ ತಳಹದಿ ಭದ್ರಗೊಂಡಲ್ಲಿ ದೇಶ ಮತ್ತು ಜಗತ್ತು ಶಾಂತಿ ಸುಭೀಕ್ಷೆಯಿಂದ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು.

ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಮಾತನಾಡಿ, ಶ್ರೀ ಕ್ಷೇತ್ರದ ಸಾನಿಧ್ಯ ಚೈತನ್ಯ ಬೆಳಗುವಲ್ಲಿ ಮಾಗಣೆಯ ಭಕ್ತರು, ಸಂಘ ಸಂಸ್ಥೆಗಳು, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ ಪ್ರಮುಖರು ನಿಸ್ವಾರ್ಥ ಸೇವೆಯ ಮೂಲಕ ಪಾಲ್ಗೊಂಡಿದ್ದು, ಧಾರ್ಮಿಕ ಕ್ಷೇತ್ರವು ಇನ್ನಷ್ಟು ಬೆಳಗಲಿ, ಭಕ್ತ ಕೋಟಿಯ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಮೂಡಿಬರಲಿ ಎಂದರು.

ದೇಗುಲದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಾವರ ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ಗಣಪತಿ ಮತ್ತು ಮಹಾಕಾಳಿ ಪಂಜುರ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಟೇಲರ ಮನೆ ಉಲ್ಲಾಸ್ ಶೆಟ್ಟಿ, ವ್ಯವಸ್ಥಾಪನ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು.ಎ.ಪ್ರಭಾಕರ್ ರಾವ್, ಪ್ರಧಾನ ಕಾರ್ಯದರ್ಶಿ ಯು. ಸುರೇಶ್ ಆಚಾರ್ಯ, ಉಪಾಧ್ಯಕ್ಷ ಶ್ರೀಶ ಭಟ್ ಕಡೇಕಾರು ಮಠ ವೇದಿಕೆಯಲ್ಲಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಗಣಪತಿ ಕಾರಂತ್ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್ ವಂದಿಸಿದರು. ಸಾಂಸ್ಕೃತಿಕ ಮತ್ತು ನಿರ್ವಹಣಾ ಸಮಿತಿ ಸಂಚಾಲಕ ಪ್ರತಾಪ್ ಕುಮಾರ್ ನಿರ್ವಹಿಸಿದರು.