108 ಆಂಬ್ಯುಲೆನ್ಸ್ ಸಿಬ್ಬಂದಿಗಳ ಬಾಕಿ ವೇತನ ತಕ್ಷಣ ಪಾವತಿಸಿ: ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ಕಳೆದ 3 ತಿಂಗಳಿನಿಂದ ಸರ್ಕಾರ 108 ಸೇವೆಯ ಸಿಬ್ಬಂದಿಗಳಿಗೆ ವೇತನ ನೀಡದೇ ಚೆಲ್ಲಾಟವಾಡುತ್ತಿದ್ದು, ಇದೀಗ ಸಿಬ್ಬಂದಿಗಳು ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಸರ್ಕಾರ ಕೂಡಲೇ ಬಾಕಿ ಇರುವ ವೇತನವನ್ನು ತಕ್ಷಣ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹ ಮಾಡಿದ್ದಾರೆ.

ತುರ್ತು ಸಂದರ್ಭದಲ್ಲಿ ರೋಗಿಗಳ ಪಾಲಿನ ಜೀವರಕ್ಷಕರಾಗಿ ಹಗಲಿರುಳು ಸೇವೆ ಸಲ್ಲಿಸುವ 108 ಸೇವೆಯ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಸಂಬಳ ಭಾಗ್ಯವನ್ನೇ ನೀಡಿಲ್ಲ. ಸದಾ ಗ್ಯಾರಂಟಿಗಳ ನೆಪದಲ್ಲಿ ರಾಜ್ಯ ಸರ್ಕಾರ ದೈನಂದಿನ ಅಗತ್ಯ ಸೇವೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಇಂದು 108 ಸೇವಾ ಸಿಬ್ಬಂದಿಗಳ ಮುಷ್ಕರದಿಂದ ರಾಜ್ಯದ ರೋಗಿಗಳು ತುರ್ತು ಸೇವೆಯಿಂದ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ತಕ್ಷಣ ಸಿಬ್ಬಂದಿಗಳ ವೇತನವನ್ನು ಪಾವತಿಸಿ ನ್ಯಾಯ ಬದ್ಧವಾದ ಬೇಡಿಕೆಯನ್ನು ಪರಿಗಣಿಸಿ ಮುಷ್ಕರ ಹಿಂಪಡೆಯುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಈ ಬಂದ್ ನಿಂದಾಗಿ ಸಂಭವಿಸುವ ಎಲ್ಲಾ ಅನಾನುಕೂಲತೆ ಹಾಗೂ ಸಮಸ್ಯೆಗಳಿಗೆ ಸರಕಾರವೇ ಹೊಣೆಯಾಗಲಿದ್ದು ಸರ್ಕಾರ ಕೂಡಲೇ ರಾಜ್ಯದ ಜನರ ಆರೋಗ್ಯ ಸೇವೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.