ನಟಿ ಅಂಕಿತಾ ಲೋಖಂಡೆ ಅವರ ಸಿನಿ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಭಿಮಾನಿಗಳು ಲೋಖಂಡೆ ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಅಂಕಿತಾರ ತಂದೆಯ ನಿಧನದ ಸುದ್ದಿ ಕೇಳಿದ ಸಹನಟರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ಅವರು ಶನಿವಾರದಂದು (ಆಗಸ್ಟ್ 12) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್ ಲೋಖಂಡೆ ವಿಧಿವಶರಾಗಿದ್ದಾರೆ.
ಅಂತಿಮ ನಮನ ಸಲ್ಲಿಸಿದ ಸಿನಿ ಸ್ನೇಹಿತರು: ಜನಪ್ರಿಯ ಧಾರಾವಾಹಿ ಪವಿತ್ರ ರಿಷ್ತಾದಲ್ಲಿನ ಅರ್ಚನಾ ಪಾತ್ರಕ್ಕೆ ಮೆಚ್ಚುಗೆ ಸ್ವೀಕರಿಸಿರುವ ನಟಿ ಅಂಕಿತಾ ಲೋಖಂಡೆ ತಂದೆ ನಿಧನದ ಕುರಿತು ಇನ್ನೂ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿಲ್ಲ. ಈ ಕಠಿಣ ಸಂದರ್ಭದಲ್ಲಿ ನಟಿಯ ಸ್ಥಿತಿಯನ್ನು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಪತಿ ವಿಕ್ಕಿ ಜೈನ್ ಅಂಕಿತಾರ ದುಃಖ ಹಂಚಿಕೊಂಡಿದ್ದಾರೆ. ಇನ್ನು ಕುಟುಂಬಸ್ಥರು, ಸ್ನೇಹಿತರನ್ನು ಹೊರತುಪಡಿಸಿ ನಿರ್ಮಾಪಕ ಸಂದೀಪ್ ಸಿಂಗ್, ಶ್ರದ್ಧಾ ಆರ್ಯ, ಕುಶಾಲ್ ಟಂಡನ್ ಸೇರಿದಂತೆ ಕಿರುತೆರೆ, ಹಿರಿತೆರೆ ಗಣ್ಯರು ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು.
ಓಶಿವಾರ ಸ್ಮಶಾನದಲ್ಲಿ ಶಶಿಕಾಂತ್ ಲೋಖಂಡೆ ಅಂತ್ಯಕ್ರಿಯೆ: ಇಂದು (ಆಗಸ್ಟ್ 13, 2023) ಬೆಳಗ್ಗೆ 11 ಗಂಟೆ ಹೊತ್ತಿಗೆ ಓಶಿವಾರ ಸ್ಮಶಾನದಲ್ಲಿ ಶಶಿಕಾಂತ್ ಲೋಖಂಡೆ ಅವರ ಅಂತ್ಯಕ್ರಿಯೆ ವಿಧಿವಿಧಾನಗಳೊಂದಿಗೆ ನೆರವೇರಿತು. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ಅಂತಿಮ ನಮನ ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.ವಯೋಸಹಜ ಅನಾರೋಗ್ಯ ಹಿನ್ನೆಲೆ ಕೊನೆಯುಸಿರು: ಶಶಿಕಾಂತ್ ಲೋಖಂಡೆ ಅವರು ತಮ್ಮ ಮುದ್ದು ಮಗಳು ಅಂಕಿತಾರ ಸಿನಿ ಪಯಣಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಅವರು ನಟಿಯ ಶಕ್ತಿಯ ಆಧಾರ ಸ್ತಂಭವಾಗಿ ಗುರುತಿಸಿಕೊಂಡಿದ್ದರು. ಶಶಿಕಾಂತ್ ಲೋಖಂಡೆ ಮರಣದ ನಿಖರ ಕಾರಣಗಳು ಸೀಮಿತವಾಗಿವೆ. ವಯೋಸಹಜ ಅನಾರೋಗ್ಯ ಹಿನ್ನೆಲೆ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ.