ಈ ಯುವತಿಯ ಕೈಯಲ್ಲರಳಿದ ಚಿತ್ರ ನೋಡಿದ್ರೆ ನೀವು ಕ್ಲೀನ್ ಬೋಲ್ಡ್ : ಇದು ಕುಂದಾಪ್ರದ ಕಲಾಚತುರೆ ಪಾವನ ಕತೆ

♦ ಮಂಜುಳಾ . ಜಿ . ತೆಕ್ಕಟ್ಟೆ

ಕರುನಾಡೇ ಕಲೆಗಳ ತವರೂರು. ಇಲ್ಲಿ ಕಲಾಮಾತೆಯ ಕಂದಮ್ಮಗಳಾಗಿ ಬೆಳೆದು ಸಾಧಿಸಿದವರಿಗೇನೂ ಕಡಿಮೆ ಇಲ್ಲ. ಎಲೆ ಮರೆಯ ಕಾಯಿಗಳಂತಿದ್ದುಕೊಂಡು ಸಾಧನೆ ಮಾಡಿರುವ ಪ್ರತಿಭಾ ಸಾಧಕರನ್ನು ಹುಡುಕುತ್ತಾ ಹೋದಾಗ ಸಿಕ್ಕಿದ್ದು  ಕುಂದಾಪುರದ ಬೈಲೂರಿನ ಯುವ ಪ್ರತಿಭೆ ಪಾವನಾ. ಚಿತ್ರ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಾ, ಇತರ ಕಲಾವಿದರಿಗೂ ಸ್ಪೂರ್ತಿಯಾಗಿರೋ ಈ ಯುವ ಚಿತ್ರಗಾರ್ತಿಯ ಕತೆ ಕೇಳೊಣ ಬನ್ನಿ.

ವ್ಯಕ್ತಿ ಚಿತ್ರ ಕಲಾವಿದೆಯಾಗಿ ಗುರುತಿಸಲ್ಪಟ್ಟು ಈ ಕ್ಷೇತ್ರದಲ್ಲಿ ತನ್ನದೇ ಒಂದು ಮಾರ್ಗ ಹಿಡಿದು ಸಾಧನೆಯ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಪಾವನ ಬೈಲೂರು, ಕುಂದಾಪುರದ ಬೈಲೂರು ಗ್ರಾಮದ ಗೀತಾ ಕುಮಾರಿ ಹಾಗೂ ಮಂಜಪ್ಪ ಬಿ ದಂಪತಿಯ ಪುತ್ರಿ.

ಪಾವನಾ

ಪ್ರಾಥಮಿಕ ಶಿಕ್ಷಣವನ್ನು ಬೈಲೂರು ಹಿರಿಯಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲು ಶಿಕ್ಷಣವನ್ನು ಸಂಜಯ್ ಗಾಂಧಿ ಪ್ರೌಢ ಶಾಲೆಯಲ್ಲಿ , ಬಿ. ಎ ಪದವಿಯನ್ನು ಕುಂದಾಪುರದ ಭಂಡಾರ್ಕಸ್ ಕಾಲೇಜಿನಲ್ಲಿ ಪೂರೈಸಿದ ಇವರಿಗೆ ಶಾಲಾ ದಿನಗಳಿಂದಲೇ ಚಿತ್ರಕಲಾ ಆಸಕ್ತಿ ಗಾಢವಾಗಿತ್ತು.

ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು,  ಉಡುಪಿಯ ಚಿತ್ರ ಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಣ ಪೂರೈಸಿ ಇದೀಗ ವ್ಯಕ್ತಿ ಚಿತ್ರ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ.

♦ವ್ಯಕ್ತಿ ಚಿತ್ರದ ಜಾಡು ಹಿಡಿದು:   

ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ಅಪಾರ ಅಭಿರುಚಿ ಮತ್ತು ಆಸಕ್ತಿಯ ನೆಲೆಯಿಂದಲೇ ಮುನ್ನಡೆದ ಪಾವನಾ ಸತತ ಪರಿಶ್ರಮದಿಂದ ವ್ಯಕ್ತಿ ಚಿತ್ರಗಳನ್ನು ಯಶಸ್ವಿಯಾಗಿ ಬಿಡಿಸಿದ್ದಾರೆ ಹಲವಾರು ವ್ಯಕ್ತಿಗಳ ಚಿತ್ರಗಳನ್ನು ರಚಿಸಿ ಆಪ್ತ ವಲಯದಲ್ಲಿಯೂ ಮೆಚ್ಚುಗೆ ಗಳಿಸಿದ್ದಾರೆ. ತನ್ನ ಕಲಾಸಕ್ತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರ ಪ್ರತಿಫಲ ಎಲೆಮರೆಯ ಕಾಯಿ ಅಂತಿದ್ದ ಈ ಯುವ ಗ್ರಾಮೀಣ ಪ್ರತಿಭೆಗೆ ಸಾಕಷ್ಟು ಮಂದಿ ಪ್ರಶಂಸಿಸಿದ್ದಾರೆ.

ಇವರ ವ್ಯಕ್ತಿ ಚಿತ್ರಗಳಿಗೆ ವಿವಿದೆಡೆಯಿಂದ ಬೇಡಿಕೆಗಳು ಬರುತ್ತಿದ್ದು ಇಲ್ಲಿಯವರೆಗೂ 80 ವ್ಯಕ್ತಿ ಚಿತ್ರಗಳ ಆರ್ಡರ್ ಪಡೆದಿದ್ದು, ಅವೆಲ್ಲವನ್ನೂ ಯಶಸ್ವಿಯಾಗಿ ರಚಿಸಿಕೊಟ್ಟಿದ್ದಾರೆ.

ಗಣ್ಯವಕ್ತಿಗಳ ವ್ಯಕ್ತಿ ಚಿತ್ರವನ್ನು ರಚಿಸುವಲ್ಲೂ ಸೈ ಎನಿಸಿಕೊಂಡಿದ್ದಾರೆ ಪಾವನಾ. ಅಂದ ಹಾಗೆ ಪಾವನ ಬೈಲೂರು ಅವರ ಕುಂಚದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ,  ಸ್ಸ್ಯಾಂಡಲ್ ವುಡ್ ನ ನಟಿಯರಾದ ರಾಧಿಕಾ ಪಂಡಿತ್, ರಚಿತಾರಾಮ್, ಐಂದ್ರಿತಾರೈ, ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, ವಿಶ್ವದಾಖಲೆ ಮಾಡಿದ ಕ್ರೀಡಾಪಟು ಹುಸೈನ್ ಬೋಲ್ಟ್ ಮೊದಲಾದ ಗಣ್ಯರು ಬಣ್ಣವಾಗಿದ್ದಾರೆ.

♦ಗೋಡೆಚಿತ್ರಕ್ಕೂ ಸೈ:  

ಪಾವನ ಬೈಲೂರು ತಮ್ಮ ಚಿತ್ರಕಲಾ ಪ್ರತಿಭೆಯನ್ನು ವ್ಯಕ್ತಿ ಚಿತ್ರಕ್ಕೆ ಮಾತ್ರ ಸೀಮಿತಗೊಳಿಸದೆ ಗೋಡೆ ಚಿತ್ರ ಅಥವಾ ವಾಲ್ ಪೇಂಟಿಂಗ್ ನಲ್ಲೂ ಕೈ ಚಳಕ ತೋರಿ ಮೆಚ್ಚುಗೆ ಗಳಿಸಿದ್ದಾರೆ.  ಪಾವನ ಬೈಲೂರು ಅವರ ಪೇಟಿಂಗ್ ಶಂಕರನಾರಾಯಣದ ಮದರ್ ತೆರೇಸಾ ಶಾಲೆ , ಬೈಲೂರಿನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿನಾಯಕ ಶಾಲೆ ಟಿ ಟಿ ರೋಡ್ ಕುಂದಾಪುರ ಇಲ್ಲಿಯ ಗೋಡೆಗಳ ಮೇಲೆ ಗಮನಸೆಳೆಯುತ್ತಿದೆ.

ಪಾವನ ಬೈಲೂರು ಕೇವಲ ಚಿತ್ರಕಲಾವಿದೆ ಮಾತ್ರವಲ್ಲ!! ಉತ್ತಮ ನೃತ್ಯ ಗಾರ್ತಿ, ಹವ್ಯಾಸಿ ಹಾಡುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.ಇಲ್ಲಿ ತನಕ ಪಾವನಾಗೆ ಯಾವ ಬಿರುದು- ಸಮ್ಮಾನ ದೊರೆತಿಲ್ಲವಾದರೂ ಅದಕ್ಕೆ ಹಂಬಲಿಸುವ ಹುಡುಗಿಯಲ್ಲ ಪಾವನಾ.

♦ಈ ಕಲಾ ಕುಸುಮಕ್ಕೆ ನಿಮ್ಮದ್ದೊಂದು ಹಾರೈಕೆ ಇರ್ಲಿ:

ಅಪಾರ ಶೃದ್ದೆ, ನಿಷ್ಠೆ, ಪರಿಶ್ರಮದಿಂದ ಸಾಧನೆಯ ಮೆಟ್ಟಿಲ ಏರಲು ಅಣಿಯಾಗಿರುವ.ಕಲೆಯಲ್ಲಿಯೇ ಬದುಕ ಕಟ್ಟಿಕೊಳ್ಳಬೇಕು ಅನ್ನೋ ಕನಸಿರುವ ಈ ಯುವತಿಗೆ ನಿಮ್ಮಲ್ಲೆರ ಪ್ರೋತ್ಸಾಹವಿರಲಿ.

ನಿಮ್ಮಲ್ಲಿ ಯಾರಿಗಾದರೂ ಪಾವನ ಬೈಲೂರು ಅವರ ಕುಂಚದಿಂದ ನಿಮ್ಮ ಹಾಗೂ ನಿಮ್ಮ ಆಪ್ತರ ವ್ಯಕ್ತಿ ಚಿತ್ರ ರಚಿಸಿ ನೋಡುವಾಸೆ ಇದ್ದರೆ, ಖಂಡಿತ ಪಾವನ ಅವರ ಕುಂಚ ಅದಕ್ಕೆ ಸಿದ್ದವಾಗಿದೆ, ಚಿತ್ರಗಳ ಆರ್ಡರ್ ಗಳಿಗಾಗಿ ಅವರ ಸಂಪರ್ಕ (8861395593 -pavana227@gamil.com).

ಬರಹ: ಮಂಜುಳಾ . ಜಿ . ತೆಕ್ಕಟ್ಟೆ

(ಮಂಜುಳಾ ತೆಕ್ಕಟ್ಟೆ, ಕಾಪು ಸರಕಾರಿ ಪ್ರ.ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು)