ಕೊಡವೂರು: ದೇಶಾಭಿಮಾನದ ಕಿಚ್ಚು ಮನೆ ಮನೆಗಳಲ್ಲಿ ಆರಂಭವಾಗಿ ಮನೆಯ ಮಕ್ಕಳಲ್ಲಿ ಜಾಗೃತಿ ಮೂಡಿದರೆ ಮಾತ್ರ ಸಂಗೊಳ್ಳಿ ರಾಯಣ್ಣನಂತಹ ನಿಜ ದೇಶಭಕ್ತರ ಯಶೋಗಾಥೆ ಮನವನ್ನು ಮುಟ್ಟುತ್ತದೆ.ನಮ್ಮ ಸಂಸ್ಕ್ರತಿ, ನಮ್ಮ ಆಚಾರ ವಿಚಾರ ಪದ್ಧತಿ ಇವೆಲ್ಲವನ್ನೂ ಮೊದಲು ನಮ್ಮ ನಮ್ಮ ಮನೆಗಳಲ್ಲಿ ಉಳಿಸುವ ಕೆಲಸ ಆಗಬೇಕು. ಆಗ ನಾವು ಉದ್ಧಾರ ಆಗುತ್ತೇವೆ ಹಾಗೆಯೇ , ದೇಶ ಉದ್ಧಾರ ಆಗುತ್ತದೆ ಎಂದು ನಗರ ಸಭಾ ಸದಸ್ಯ ಕೆ.ವಿಜಯ ಕೊಡವೂರು ಅಭಿಪ್ರಾಯಪಟ್ಟರು.
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಉಡುಪಿ ಜಿಲ್ಲೆ ತಮ್ಮ ಕೇಂದ್ರ ಕಚೇರಿ ಆದಿಉಡುಪಿಯಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣನ 225 ನೇ ಜಯಂತೋತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ನಿಜವಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಗುರುತಿಸಿ ಅವರ ತ್ಯಾಗವನ್ನು ಗುರುತಿಸುವುದರೊಂದಿಗೆ ಅವರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದುವೇ ನಾವು ಅವರಿಗೆ ನೀಡುವ ಬಹು ದೊಡ್ಡ ಗೌರವ ಎಂದು ಯುವ ಜನತೆಗೆ ಕರೆ ನೀಡಿದರು.
ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಇನ್ನೋರ್ವ ಅತಿಥಿ ಕೊಡವೂ ರು ಶ್ರೀ ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸಂಗೊಳ್ಳಿ ರಾಯಣ್ಣ ಎಂಬ ಹೆಸರು ಕರ್ನಾಟಕದ ಜನತೆ ಎಂದೂ ಮರೆಯದ ವ್ಯಕ್ತಿತ್ವ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ರಾಯಣ್ಣನ ಹುಟ್ಟು ಹಬ್ಬ ಹಾಗು ಹುತಾತ್ಮರಾದ ದಿನವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಚರಿಸಲು ಸುತ್ತೋಲೆ ಹೊರಡಿಸಿದ ಮಾನ್ಯಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಸಾಮೂಹಿಕ ರಕ್ಷಾ ಬಂಧನ ಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.
ರಾಯಣ್ಣ ಅಭಿಮಾನಿ ಬಳಗದ ಗೌರವ ಸಲಹೆಗಾರ ಜನಾರ್ದನ ಕೊಡವೂರು ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು.ಸಭಾಧ್ಯಕ್ಷತೆಯನ್ನು ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಿ ಯಾವುದೇ ಜಾತಿಗೆ ಸೀಮಿತವಾಗಿರದೆ ತನ್ನ ದೇಶಾಭಿಮಾನದ ಮೂಲಕ ಪ್ರಾತಸ್ಮರಣೀಯಿಯರಾಗಿರುವ ರಾಯಣ್ಣನ ಆದರ್ಶ ನಾವೆಲ್ಲಾ ಮೈಗೂಡಿಸಿ ಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಮಂಜುನಾಥ ಆರ್ ನೋಟಗಾರ್,ಪ್ರಕಾಶ್ ಸಜ್ಜನ್, ಮಂಜುನಾಥ ವೈ ನೋಟಗಾರ್ ಉಪಸ್ಥಿತ ರಿದ್ದರು. ದೀಪಿಕಾ ಆಚಾರ್ಯ ಪ್ರಾರ್ಥಿಸಿದರು. ಸವಿತಾ ನೋಟಗಾರ್ ಧನ್ಯವಾದವಿತ್ತರು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.