ಐಪಿಎಲ್‌ನಲ್ಲಿ ಭಾಗವಹಿಸಲು ತನ್ನ ಮದುವೆಯನ್ನು ಮುಂದೂಡಿದ ಪಾಟಿದಾರ್! ಮಗನ ಕಥೆಯನ್ನು ಬಿಚ್ಚಿಟ್ಟ ತಂದೆ!!

ಬೆಂಗಳೂರು: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವುದರಿಂದ ಹಿಡಿದು, ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ದೋಣಿಯನ್ನು ದಡಕ್ಕೆ ಹಾಯಿಸುವವರೆಗಿನ ಈ ಪ್ರಯಾಣದಲ್ಲಿ ಪಾಟಿದಾರ್ ನಿಜವಾಗಿಯೂ ಬಹಳ ದೂರ ಸಾಗಿದ್ದಾರೆ. ಒಂದೇ ಮ್ಯಾಚ್ ನಲ್ಲಿ ರಜತ್ ಪಾಟೀದಾರ್ ಕ್ರಿಕೆಟ್ ಮತ್ತು ಆರ್ ಸಿ ಬಿ ಪ್ರೇಮಿಗಳ ಕಣ್ಮಣಿಯಾಗಿ ಬದಲಾಗಿದ್ದಾರೆ.

ಪಾಟಿದಾರ್ ಅವರ ತಂದೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಐಪಿಎಲ್ ನಲ್ಲಿ ಮಾರಾಟವಾಗದೆ ಉಳಿದ ಕಾರಣ ಅದೇ ಸಮಯದಲ್ಲಿ ಮಗ ಮದುವೆಯಾಗಬೇಕಿತ್ತು, ಆದರೆ ಲುವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ, ತನ್ನ ಮಗ ರಜತ್ ಪಾಟಿದಾರ್ ಅನ್ನು ಆರ್ ಸಿ ಬಿ ತಂಡಕ್ಕೆ ಸೇರಿಸಿಕೊಂಡಿತು. ಹೀಗಾಗಿ ರಜತ್ ತನ್ನ ಮದುವೆಯನ್ನು ಮುಂದೂಡಬೇಕಾಯಿತು.

ರತ್ಲಾಮ್‌ ಹುಡುಗಿಯ ಜೊತೆ ಮದುವೆ ಮಾತುಕತೆ ನಡೆದಿದ್ದು, ಮೇ 9 ರಂದು ಮದುವೆಯ ದಿನಾಂಕ ನಿಶ್ಚಯವಾಗಿದ್ದು ಹೋಟೇಲ್ ಅನ್ನು ಕೂಡಾ ಬುಕ್ ಮಾಡಲಾಗಿತ್ತು ಎಂದು ರಜತ್ ಅವರ ತಂದೆ ತಿಳಿಸಿದ್ದಾರೆ.

ರೆಕಾರ್ಡ್ ಗಳ ಸರದಾರ ರಜತ್ ಪಾಟೀದಾರ್

ಐಪಿಲ್ ರಂಗಕ್ಕೆ ರಜತ್ ತೀರಾ ಹೊಸಬರು. 2021 ರ ಹರಾಜಿನಲ್ಲಿ ಆರ್ ಸಿ ಬಿ ಅವರನ್ನು ಅವರ ಮೂಲ ಬೆಲೆ 20 ಲಕ್ಷಕ್ಕೆ ತೆಗೆದುಕೊಂಡಿತು. ಕಳೆದ ವರ್ಷ ಬೆಂಗಳೂರು ಪರ ಕೇವಲ 4 ಪಂದ್ಯಗಳನ್ನಾಡಿದ್ದ ಅವರು ಒಟ್ಟು 71 ರನ್ ಪೇರಿಸಿದ್ದರು.

  • ಪಾಟಿದಾರ್ ಈಗ ಐಪಿಎಲ್ ಪ್ಲೇಆಫ್‌ಗಳ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಹೊಂದಿರುವ ಅನ್ ಕ್ಯಾಪ್ಡ್ ಆಟಗಾರ.
  • ನಾಕೌಟ್ ಪಂದ್ಯಗಳಲ್ಲಿ ಯಾವುದೇ ಆರ್ ಸಿ ಬಿ ಬ್ಯಾಟ್ಸ್‌ಮನ್‌ ಗಿಂತ ಅತ್ಯಧಿಕ ಸ್ಕೋರ್ ಮಾಡಿರುವ ಆಟಗಾರ ಪಾಟೀದಾರ್. ಈ ಹಿಂದೆ 2011ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೇಲ್ 89 ರನ್ ಗಳಿಸಿದ್ದು ಅತ್ಯುತ್ತಮ ಸ್ಕೋರ್ ಆಗಿತ್ತು.
  • ಪಾಟಿದಾರ್ ಈಗ ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್ ಪಂದ್ಯದಲ್ಲಿ 100 ರನ್ ಗಳಿಸಿದ ಐದನೇ ಆಟಗಾರ.

ಪಾಟಿದಾರ್ ಮಧ್ಯಪ್ರದೇಶದ ಇಂದೋರ್‌ನವರು ಮತ್ತು ರಣಜಿ ಟ್ರೋಫಿಯಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಪಾಟೀದಾರ್ ಅಬ್ಬರವನ್ನು 2018-19 ರ ರಣಜಿ ಋತುವಿನಲ್ಲಿ ಕಾಣಲಾಗಿತ್ತು. ಈಗ ಐಪಿಎಲ್ ನಲ್ಲೂ ಅವರ ಅಬ್ಬರ ನೋಡಲು ಸಿಗುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.