ಜ. 18ರ ಬೆಳಿಗ್ಗೆಯ ಬದಲು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ತೀರ್ಮಾನ: ಯತಿ ಈಶಪ್ರಿಯ ಸ್ವಾಮೀಜಿ

ಉಡುಪಿ: ಪರ್ಯಾಯ ಮಹೋತ್ಸವದ ಹೊರೆಕಾಣಿಕೆಯನ್ನು ಒಮ್ಮೇಲೆ ತಂದು ರಾಶಿ ಹಾಕುವ ಬದಲು ಮುಂದಿನ ಪರ್ಯಾಯ ಅವಧಿಯಲ್ಲಿ 15 ದಿನಗಳಿಗೊಮ್ಮೆ ಎರಡು ವರ್ಷ ಪೂರ್ತಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ದವಸ ಧಾನ್ಯ, ತರಕಾರಿ ಸೇರಿದಂತೆ ಇತರ ವಸ್ತುಗಳು ಹಾಳಾಗದಂತೆ ಬಳಸಿಕೊಳ್ಳಬಹುದಾಗಿದೆ .ಮುಂಬರುವ ಅದಮಾರು ಪರ್ಯಾಯ ಮಹೋತ್ಸವದಲ್ಲಿ ಜನವರಿ 18ರ ಬೆಳಿಗ್ಗೆಯ ಬದಲು ಮಧ್ಯಾಹ್ನ 3 ಗಂಟೆಗೆ ಪರ್ಯಾಯ ದರ್ಬಾರು ನಡೆಸಲು ಉದ್ದೇಶಿಸಲಾಗಿದ್ದು, ಇದರಿಂದ ಎಲ್ಲ ಭಕ್ತರಿಗೆ ಪರ್ಯಾಯ ದರ್ಬಾರು ವೀಕ್ಷಿಸಲು ಅನುಕೂಲವಾಗಲಿದೆ , ಪರ್ಯಾಯ ಮೆರವಣಿಗೆ ವಿಕ್ಷೀಸಿ ಭಕ್ತರು ಸುಸ್ತಾಗಿರುವುದರಿಂದ ಮತ್ತು ಸ್ವಾಮೀಜಿಗೆ ಪೂಜೆ ನಡೆಸಿ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಈ ರೀತಿಯ ತೀರ್ಮಾನ ಕೈಗೊಳ್ಳಲಾಗಿದೆ  ಎಂದು ಅದಮಾರು ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ತಿಳಿಸಿದರು.

ಉಡುಪಿ ಪೂರ್ಣಪ್ರಜ್ಞಾ ಆಡಿಟೋರಿಯಂನ ಸಭಾಂಗಣದಲ್ಲಿ ಶನಿವಾರ ನಡೆದ ಉಡುಪಿ ಅದಮಾರು ಮಠದ
ಪರ್ಯಾಯ ಮಹೋತ್ಸವದ ಪೂರ್ವ ಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ನೈಸರ್ಗಿಕ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು
ನೈಸರ್ಗಿಕ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಪ್ಲಾಸ್ಟಿಕ್‌ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲಾಗುವುದು. ಭೋಜನಕ್ಕೆ ಬಳಸುವ ಬಾಳೆಎಲೆಗಾಗಿ ಚಾರಾ ಗ್ರಾಮದ 10 ಎಕರೆ ಜಾಗದಲ್ಲಿ ಈಗಾಗಲೇ ಬಾಳೆತೋಟವನ್ನು ಬೆಳೆಸಲಾಗಿದೆ. ಈ ಬಾರಿಯ ಪರ್ಯಾಯವನ್ನು ವಿಜೃಂಭಣೆ ಜತೆಗೆ ಕಡಿಮೆ ಖರ್ಚಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಕಿರಿಯ ಯತಿಗಳ ಹೊಸ ಚಿಂತನೆ:
ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ, ಮುಂದಿನ ಅದಮಾರು ಮಠದ ಪರ್ಯಾಯ
ಮಹೋತ್ಸವದ ಸಲುವಾಗಿ ತೆಗೆದುಕೊಂಡಿರುವ ಕೆಲ ಹೊಸ ಚಿಂತನೆಗಳು ಕಿರಿಯ ಯತಿಗಳದ್ದೇ
ಆಗಿದೆ. 15 ದಿನಗಳಿಗೊಮ್ಮೆ ನಡೆಯುವ ಹೊರೆಕಾಣಿಕೆಯಿಂದ ಭಕ್ತರು ವರ್ಷ ಇಡೀ ಶ್ರೀಕೃಷ್ಣ
ಮುಖ್ಯಪ್ರಾಣ ದೇವರ ಆರಾಧನೆ ಮಾಡಬಹುದಾಗಿದೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಎ.ಜಿ. ಕೊಡ್ಗಿ ಮಾತನಾಡಿದರು.
ಕೃಷ್ಣಾ ಸೇವಾ ಬಳಗದ ಅಧ್ಯಕ್ಷ ಎಂ.ಬಿ. ಪುರಾಣಿಕ್‌ ಸ್ವಾಗತಿಸಿದರು. ನಿವೃತ್ತಪ್ರಾಂಶುಪಾಲ ಡಾ. ಜಗದೀಶ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.