ಬುಡಾಪೆಸ್ಟ್ (ಹಂಗೇರಿ): 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ 11ನೇ ಸ್ಥಾನ ಪಡೆದು 2024ರ ಪ್ಯಾರಿಸ್ ಒಲಂಪಿಕ್ಸ್ಗೆ ಆಯ್ಕೆ ಆಗಿದ್ದಾರೆ.ಸ್ಪರ್ಧೆಯಲ್ಲಿ 9:15.31 ಸಮಯದಲ್ಲಿ ಓಟ ಪೂರ್ಣಗೊಳಿಸಿದ ಅವರು, 11ನೇ ಸ್ಥಾನ ಪಡೆದರು. ಈ ಮೂಲಕ ಪಾರುಲ್ 2024 ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. 3000 ಮೀಟರ್ ಓಟವನ್ನು 9:15.31 ನಿಮಿಷದಲ್ಲಿ ಪೂರೈಸಿದ್ದು ಭಾರತದ ದಾಖಲೆಯಾಗಿದೆ.ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023ರ 3000 ಮೀಟರ್ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಭಾರತದ ಅಥ್ಲೀಟ್ ಪಾರುಲ್ ಚೌಧರಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.
ಪಾರುಲ್ ಮೊದಲ 200 ಮೀಟರ್ನಲ್ಲಿ ಮುನ್ನಡೆ ಸಾಧಿಸಿದ್ದರು. ನಂತರ ವೇಗವನ್ನು ಕಳೆದುಕೊಂಡರು. 2900 ಮೀಟರ್ ಇದ್ದಾಗ 13ನೇ ಸ್ಥಾನದಲ್ಲಿದ್ದ ಅವರು ವೇಗವನ್ನು ಹೆಚ್ಚಿಸಿ ಇಬ್ಬರು ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿದರು. ಇದರಿಂದ ಅವರು 11ನೇ ಸ್ಥಾನ ಪಡೆದುಕೊಂಡರು.8:54.29 ಸಮಯದಿಂದ ಬ್ರೂನಿ ಅಥ್ಲೀಟ್ ವಿನ್‌ಫ್ರೆಡ್ ಮ್ಯೂಟಿಲ್ ಯವಿ ಚಿನ್ನದ ಪದಕವನ್ನು ಪಡೆದರೆ, ಕೀನ್ಯಾದ ಬೀಟ್ರಿಸ್ ಚೆಪ್‌ಕೋಚ್ 8:58.98ರ ಸಮಯದಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. 9:00.69 ಸಮಯ ತೆಗೆದುಕೊಂಡ ಕೀನ್ಯಾದ ಅಥ್ಲೀಟ್ ಫೇಯ್ತ್ ಚೆರೋಟಿಚ್ ಕಂಚಿಗೆ ಕೊರಳೊಡ್ಡಿದರು.
ಗೋಲ್ಡನ್ ಬಾಯ್ಗೆ ಚಿನ್ನ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಜಾವೆಲ್ ಥ್ರೋದಲ್ಲಿ ಪದಕ ಗೆಲ್ಲುವ ನಿರೀಕ್ಷೆ ಭಾರತದ ಕ್ರೀಡಾಸಕ್ತರಲ್ಲಿತ್ತು. ನೀರಜ್ ಚೋಪ್ರಾ ಹುಸಿಯಾಗಿಸಲಿಲ್ಲ. ಮೊದಲ ಎಸೆತವನ್ನು ಪೌಲ್ ಮಾಡಿದ ಅವರು ಎರಡನೇ ಪ್ರಯತ್ನದಲ್ಲಿ 88.17 ಮೀಟರ್ ದೂರ ಈಟಿ ಎಸೆದು ಚಿನ್ನವನ್ನು ಗೆದ್ದರು. ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಮೊದಲ ಚಿನ್ನವನ್ನು ತಂದುಕೊಟ್ಟರು.
ಭಾರತದ ಇನ್ನಿಬ್ಬರು ಆಟಗಾರರಾದ ಕಿಶೋರ್ ಜೆನಾ ಮತ್ತು ಕರ್ನಾಟಕದ ಡಿ ಪಿ ಮನು ಕೂಡಾ ಚಾವೆಲಿನ್ ಥ್ರೋದ ಫೈನಲ್‌ನಲ್ಲಿ ಭಾಗವಹಿಸಿದ್ದರು. ಈ ಇಬ್ಬರು ಪ್ರಶಸ್ತಿ ಗೆಲ್ಲದಿದ್ದರು ಗಮನಾರ್ಹ ಪ್ರದರ್ಶನ ನೀಡಿದರು. ಕಿಶೋರ್ ತಮ್ಮ 5ನೇ ಪ್ರಯತ್ನದಲ್ಲಿ 84.77 ಮೀಟರ್ ಎಸೆದು 5ನೇ ಸ್ಥಾನ ಪಡೆದರೆ, ಮನು 6ನೇ ಪ್ರಯತ್ನದಲ್ಲಿ 84.14 ಮೀಟರ್ ದೂರ ಎಸೆದು ಆರನೇ ಸ್ಥಾನ ಪಡೆದಿದ್ದಾರೆ.
ರಿಲೇಯಲ್ಲಿ ಐದನೇ ಸ್ಥಾನ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಪುರುಷರ 4×400 ಮೀಟರ್ ರಿಲೇ ಓಟವನ್ನು ಮುಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ 2:59.92 ನಿಮಿಷದಲ್ಲಿ ಪೂರ್ಣಗೊಳಿಸಿ ಐದನೇ ಸ್ಥಾನ ಗಳಿಸಿದರು. ಅಮೆರಿಕದ ರಿಲೇ ತಂಡ 2:57.31 ನಿಮಿಷದಲ್ಲಿ 400 ಮೀಟರ್ ಪೂರ್ಣಗೊಳಿಸಿದ್ದರಿಂದ ಚಿನ್ನದ ಪದಕ ಗೆದ್ದರು. 2:58.45 ನಿಮಿಷದಲ್ಲಿ ಮುಗಿಸಿದ ಫ್ರಾನ್ಸ್ ತಂಡ ಬೆಳ್ಳಿ ಗೆದ್ದರೆ, ಗ್ರೇಟ್ ಬ್ರಿಟನ್ 2:58.71 ನಿಮಿಷದಿಂದ ಕಂಚಿಗೆ ತೃಪ್ತಿ ಪಟ್ಟಿದೆ.