ದೀಪಾವಳಿಯಂದು ಖಂಡಗ್ರಾಸ ಸೂರ್ಯಗ್ರಹಣ: ಸೂರ್ಯಾಸ್ತಮಾನದ ಹೊತ್ತಿನಲ್ಲಿ ಖಗೋಳ ವಿದ್ಯಮಾನ

ಉಡುಪಿ/ ಮಂಗಳೂರು: ಅಕ್ಟೋಬರ್ 25 ರ ದೀಪಾವಳಿ ಸಂಭ್ರಮದಂದು ಭಾರತವು ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ. ಕೊಲ್ಕತ್ತಾದಿಂದ ಭಾಗಶಃ ಸೂರ್ಯಗ್ರಹಣವನ್ನು ಸ್ವಲ್ಪ ಸಮಯದವರೆಗೆ ವೀಕ್ಷಿಸಬಹುದಾದರೆ, ಭಾರತದ ಉತ್ತರ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಚೆನ್ನಾಗಿ ಕಾಣಬಹುದು. ಸೂರ್ಯಸ್ತಮಾನದ ಸಮಯದಲ್ಲಿ ಖಂಡಗ್ರಾಸ ಸೂರ್ಯಗ್ರಹಣ ನಡೆಯುವುದರಿಂದ ಈಶಾನ್ಯ ಭಾರತದಿಂದ ಈ ಗ್ರಹಣವನ್ನು ವೀಕ್ಷಿಸಲು ಸಾಧ್ಯವಿಲ್ಲ. ಯುರೋಪ್, ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಈ ವಿದ್ಯಮಾನವನ್ನು ಗಮನಿಸಬಹುದು.

ಅಕ್ಟೋಬರ್ 25ರಂದು ಸೂರ್ಯ, ಚಂದ್ರ ಮತ್ತು ಭೂಮಿಯು ಬಹುತೇಕ ಒಂದೇ ಸಮತಲದಲ್ಲಿರುತ್ತದೆ, ಇದರ ಪರಿಣಾಮವಾಗಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿರುವಂತೆ ಗೋಚರಿಸುತ್ತದೆ, ಇದು ಭಾಗಶಃ ಸೂರ್ಯಗ್ರಹಣಕ್ಕೆ ಕಾರಣವಾಗುತ್ತದೆ ಎಂದು ಖಗೋಳ ಭೌತಶಾಸ್ತ್ರಜ್ಞ ದೇಬಿ ಪ್ರಸಾದ್ ದುವಾರಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅಂದು ಚಂದ್ರನು ಸೂರ್ಯನನ್ನು ಶೇ 4 ರಷ್ಟು ಮಾತ್ರ ಆವರಿಸಲಿದ್ದಾನೆ. ಗ್ರಹಣದ ಒಟ್ಟು ಅವಧಿ 56 ನಿಮಿಷಗಳಾಗಿವೆ.

ಮುಂಬೈನಲ್ಲಿ ಗ್ರಹಣವು ಸಂಜೆ 4.49 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು 6.09 ಗಂಟೆಗೆ ಕೊನೆಗೊಳ್ಳುತ್ತದೆ. ನಾಗ್ಪುರದಲ್ಲಿ 4:49 ರಿಂದ 5:42 ವರೆಗೆ ಬೆಂಗಳೂರಿನಲ್ಲಿ 5:12 ರಿಂದ 5:55 ರವರೆಗೆ, ಚೆನ್ನೈ ನಲ್ಲಿ 5:14 ಮತ್ತು 5:44 ವರೆಗೆ ಕಾಣಿಸಿಕೊಳ್ಳಲಿದೆ.

ಕರ್ನಾಟಕದ ಕರಾವಳಿಯಲ್ಲಿ ಸಂಜೆ 5.50 ರ ಸುಮಾರಿಗೆ ನೈಋತ್ಯ ದಿಗಂತದಲ್ಲಿ ಚಂದ್ರನಿಂದ ಸ್ವಲ್ಪವೇ ಸ್ವಲ್ಪ ಆವರಿಸಲ್ಪಡುವ ಸೂರ್ಯನನ್ನು ಕೆಲ ಕ್ಷಣದವರೆಗೆ ಕಾಣಬಹುದಾಗಿದೆ.

ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸುವುದು ಅಪಾಯಕಾರಿಯಾದ್ದರಿಂದ ವೀಕ್ಷಿಸಲು ಆಸಕ್ತಿ ಇರುವವರು ಗ್ರಹಣ ಕನ್ನಡಕಗಳನ್ನು ಧರಿಸುವುದು ಒಳಿತು.