ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ, ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ: ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿರಲಿ: ಡಾ.ಎಂ.ಎನ್.ಆರ್

ಉಡುಪಿ: ಗ್ರಾಮೀಣ ಭಾಗದ ರೈತರ ಏಳಿಗೆಗೆ ಸಹಕಾರಿ ಕ್ಷೇತ್ರಗಳು ಆದ್ಯತೆ ನೀಡುತ್ತಿದ್ದು, ಇಲ್ಲಿ ರಾಜಕೀಯ ಮಾಡಿದರೆ ಸಹಕಾರಿ ಕ್ಷೇತ್ರ ಬೆಳೆಯಲ್ಲ. ರೈತಾಪಿ ವರ್ಗದ ಪ್ರಗತಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಹಕಾರಿ ಹಾಗೂ ಕೃಷಿಕರ ಆಸಕ್ತಿಯುಳ್ಳ ವ್ಯಕ್ತಿಗಳು ಬರಬೇಕೆಂದು ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ಎಸ್‍ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ಪರ್ಕಳ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ ಪ್ರಯುಕ್ತ ನವೀಕೃತ ಪ್ರಧಾನ ಕಚೇರಿ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಲಮನ್ನಾ, ಬಡ್ಡಿ ರಹಿತ ಸಾಲ ಕೊಟ್ಟರೂ ಕೃಷಿಕರ ಬದುಕಿನ್ನೂ ಆಶಾದಾಯಕವಾಗಿಲ್ಲ. ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಭತ್ತದ ಕೃಷಿಗೆ ಹಾಕಿದ ಹಣವೂ ರೈತರಿಗೆ ಬರುತ್ತಿಲ್ಲ. ಕೃಷಿಕರು ಯಾವತ್ತು ಪಡೆದ ಸಾಲದ ಋಣ ಇಟ್ಟುಕೊಳ್ಳುವುದಿಲ್ಲ. ಇದನ್ನೆಲ್ಲ ಶತಮಾನಗಳ ಹಿಂದೆಯೇ ಅರ್ಥೈಸಿಕೊಂಡಿರುವ ನಮ್ಮ ಪೂರ್ವಿಕರು ಸಹಕಾರಿ ಕ್ಷೇತ್ರವನ್ನು ಕಟ್ಟಿ ಬೆಳೆಸಿದ್ದಾರೆ. ಈ ನಿಟ್ಟಿನಲ್ಲಿ ಆದಾಯದ ಮೂಲಗಳಿಗೆ ಪಡೆದ ಸಾಲ ಬಳಸಿಕೊಂಡು ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಏರಬೇಕೆಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸವಲತ್ತು ತಲುಪುವಂತೆ ಮಾಡಿದ್ದು ಸಹಕಾರಿ ಕ್ಷೇತ್ರವೇ ಹೊರತು ಯಾವ ವಾಣಿಜ್ಯ ಬ್ಯಾಂಕ್‍ಗಳಲ್ಲ. ದೇಶದ ಆರ್ಥಿಕತೆಗೂ ಸಹಕಾರಿ ಕ್ಷೇತ್ರ ಅಪಾರ ಕೊಡುಗೆ ಕೊಟ್ಟಿದೆ. ಗ್ರಾಹಕರ ನಂಬಿಕೆ ಮೇಲೆ ಒಂದೇ ದಿನದೊಳಗೆ ಸಾಲ ನೀಡಲಾಗುತ್ತದೆ. ಮಹಿಳೆಯರು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಈ ಸಂದರ್ಭ ರಾಜೇಂದ್ರ ಕುಮಾರ್ ಅವರು ಕಟ್ಟಡ ನಿಗೆ 5 ಲಕ್ಷ ರೂ. ಸಹಾಯಧನ ನೀಡುವುದಾಗಿ ಘೋಷಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಹಿರಿಯರ ಶ್ರಮ, ಸಮಾಜ ಸೇವೆ, ಬದ್ಧತೆಯಿಂದ ಸಹಕಾರಿ ಕ್ಷೇತ್ರ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿದ್ದು, ರಾಜ್ಯದ ಯಾವುದೇ ಮೂಲೆಯಲ್ಲೂ ಇಂತಹ ಬಲಿಷ್ಠ ಸಂಸ್ಥೆಗಳನ್ನು ಕಾಣಲು ಸಾಧ್ಯವಿಲ್ಲ. ಇದಕ್ಕೆಲ್ಲ ಜಿಲ್ಲೆಯ ಗ್ರಾಹಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪ್ರಾಮಾಣಿಕತೆ ಕಾರಣ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ನವೀಕೃತ ಪ್ರಧಾನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಸಹಕಾರಿ ಸಂಘಗಳ ಉಪನಿಬಂಧಕಿ (ಪ್ರಭಾರ) ಚಂದ್ರಪ್ರತಿಮ ಎಂ.ಜೆ., 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ನಗರಸಭೆ ಸದಸ್ಯೆ ಸುಮಿತ್ರಾ ಆರ್. ನಾಯಕ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪರ್ಕಳ ಹೆರ್ಗ ವ್ಯ.ಸೇ.ಸ.ಸಂಘ ಮಾಜಿ ಅಧ್ಯಕ್ಷ ಅಪ್ರಾಯ ಶ್ಯಾನುಭಾಗ್, ಹೆರ್ಗ ವ್ಯ.ಸೇ.ಸ.ಸಂಘ  ಮಾಜಿ ಮುಖ್ಯ ಕಾರ್ಯನಿರ್ವಹಣಾಕಾರಿ ಎನ್. ವೇದಮೂರ್ತಿ ಭಟ್, ಅರ್ಬಿ ಕೋಡಿ ಶ್ರೀ ವೈಷ್ಣವಿದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಜಯರಾಜ್ ಹೆಗ್ಡೆ, ಉಜ್ವಲ ಡೆವಲಪರ್ಸ್‍ನ ಪುರುಷೋತ್ತಮ ಶೆಟ್ಟಿ, ಪರ್ಕಳ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಧಾನ ವ್ಯವಸ್ಥಾಪಕ ರಮೇಶ್ ನಾಯಕ್, ಶತಮಾನೋತ್ಸವ ಸಮಿತಿ ಸಂಯೋಜಕ ಕೆ. ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಚ್. ಗಣಪತಿ ಕಾಮತ್, ಆಡಳಿತ ಮಂಡಳಿಯ ಎಂ.ದಿವಾಕರ ಶೆಟ್ಟಿ, ಭಾಸ್ಕರ ಆಚಾರ್ಯ, ಮಹೇಶ್ ನಾಯಕ್, ಶಿವರಾಮ ಪೂಜಾರಿ, ಅಣ್ಣಯ್ಯ ನಾಯಕ್ ಪಟ್ಲ, ಸುಜೀರ್ ಶೆಟ್ಟಿಗಾರ್, ಸುಶೀಲ ಶೆಡ್ತಿ, ಮಾಲತಿ ನಾಯ್ಕ್ ಎ. ಉಪಸ್ಥಿತರಿದ್ದರು.
ಪರ್ಕಳ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ಶತಮಾನೋತ್ಸವ ಸಮಿತಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಹಿಂದಿನ ಸಾಲಿನ ಅಧ್ಯಕ್ಷರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಪೂರ್ಣಿಮಾ ಮೋಹನ್ ನಾಯಕ್ ಪ್ರಾರ್ಥಿಸಿ, ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.