ಪರ್ಕಳ: ಮುಂಜಾನೆ ಮಂಜಿನ ಪರಿಣಾಮ ಟಿಟಿ ವಾಹನಕ್ಕೆ ಕಾರು ಡಿಕ್ಕಿ: ಕಾರು ಚಾಲಕನಿಗೆ ಗಾಯ

ಉಡುಪಿ: ಕಾರೊಂದು ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಪರ್ಕಳದ ಕೆನರಾ ಬ್ಯಾಂಕ್ ಸಮೀಪ ತಿರುವಿನಲ್ಲಿ ಸಂಭವಿಸಿದೆ.

ಹಿರಿಯಡಕ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಪರ್ಕಳ ಕೆನರಾ ಬ್ಯಾಂಕ್ ತಿರುವಿನಲ್ಲಿ‌ ನಿಯಂತ್ರಣ ತಪ್ಪಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟಿಟಿ ವಾಹನದಲ್ಲಿ ತೆಲಂಗಾಣ ಮೂಲದ ಅಯ್ಯಪ್ಪ ಮಾಲೆಧಾರಿಗಳು ಪ್ರಯಾಣಿಸುತ್ತಿದ್ದರು. ಅವರು ಉಡುಪಿಯಿಂದ ಧರ್ಮಸ್ಥಳದ ಕಡೆಗೆ ಸಂಚರಿಸುತ್ತಿದ್ದರು ಎನ್ನಲಾಗಿದೆ.

ಪರ್ಕಳ ಪರಿಸರದಲ್ಲಿ ಬೆಳಗ್ಗಿನ ಜಾವ ಮಂಜು ಕವಿದ ವಾತಾವರಣವಿದ್ದು, ತಿರುವು ಗೋಚರಿಸದ ಕಾರಣ ಕಾರು ಬಲಬದಿಗೆ ಸಾಗಿ ಎದುರಿನಿಂದ ಬರುತ್ತಿದ್ದ ವ್ಯಾನ್ ಗೆ ಢಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಕಾರು ಚಾಲಕ ಗಾಯಗೊಂಡಿದ್ದು, ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.