ಪರಿಸರ ಸ್ನೇಹಿ ಚುನಾವಣೆಗೆ ಮಾದರಿಯಾದ ಉಡುಪಿ ಜಿಲ್ಲಾಡಳಿತ

ಉಡುಪಿ: ಪರಿಸರ ಸ್ನೇಹಿಯಾದ ಆಡಳಿತಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡು ಜಾರಿಗೆ ತಂದಿದ್ದ ಉಡುಪಿ ಜಿಲ್ಲಾಡಳಿತವು ಇದೀಗ ಲೋಕಸಭಾ ಚುನಾವಣೆಯನ್ನೂ ಪರಿಸರ ಸ್ನೇಹಿ ನೆಲೆಯಲ್ಲಿ ನಡೆಸುವ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದೆ.

ಕಳೆದ ಮಾರ್ಚ್ 10 ರಂದು ದೆಹಲಿಯಲ್ಲಿ ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸುವಾಗ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು, ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಒತ್ತು ನೀಡುವುದಾಗಿ ಪ್ರಕಟಿಸಿದ್ದರು. ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಉಡುಪಿ ಜಿಲ್ಲಾಡಳಿತವು  ಚುನಾವಣೆ ಘೋಷಣೆಯ ಆರಂಭದಲ್ಲಿಯೇ  ಎಲ್ಲಾ  ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಸಭೆ ನಡೆಸಿ ಪರಿಸರ ಸ್ನೇಹಿ ಚುನಾವಣೆ ನಡೆಸಲು ಸಹಕಾರ ಕೋರಿತ್ತು.

ಸಾಮಾನ್ಯವಾಗಿ ಹಿಂದೆಲ್ಲಾ ಚುನಾವಣೆ ಎಂದರೆ ರಸ್ತೆಯುದ್ದಕ್ಕೂ ಬ್ಯಾನರ್, ಬಂಟಿಂಗ್ಸ್, ಪಕ್ಷದ ದ್ವಜಗಳು ಹಿಂದೆಲ್ಲಾ ಸಾಮಾನ್ಯವಾಗಿತ್ತು. ಸಾರ್ವಜನಿಕ ಸ್ಥಳಗಳ ಗೋಡೆಗಳಲ್ಲೂ ಚುನಾವಣೆಯ ಭರಾಟೆ ಎದ್ದು ಕಾಣುತ್ತಿದ್ದವು.  ಇವುಗಳನ್ನು ನೋಡಿಯೇ ಸಾರ್ವಜನಿಕರು ಚುನಾವಣೆಯ ಬಗ್ಗೆ ವಿಶ್ಲೇಷಣೆ, ಯಾರ ಪರ ಹೆಚ್ಚು ಒಲವು ಇದೆ ಎಂಬುದನ್ನು ಚರ್ಚಿಸುತ್ತಿದ್ದರು.

ಆದರೆ, ಪ್ರಸಕ್ತ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಕುರಿತ ರಾಜಕೀಯ ಪಕ್ಷಗಳ/ಅಭ್ಯರ್ಥಿಗಳ ಬಗೆಗಿನ ಪ್ಲಾಸ್ಟಿಕ್ ಫ್ಲೆಕ್ಸ್, ಕಟೌಟ್, ಬಂಟಿಂಗ್ಸ್‍ಗಳು ಬಹಳ ಅಪರೂಪವಾಗಿದೆ. ಅಭ್ಯರ್ಥಿಗಳ ಸಭೆ ನಡೆಯುವ ಸ್ಥಳಗಳ ಆವರಣದಲ್ಲಿ ಮಾತ್ರ  ಬಟ್ಟೆಯಲ್ಲಿ ತಯಾರಿಸಿದ ಬ್ಯಾನರ್, ಧ್ವಜಗಳು ಕಾಣ ಸಿಗುತ್ತದೆ.  ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆದು ಬ್ಯಾನರ್, ಕಟೌಟ್, ಬಂಟಿಂಗ್ಸ್ ಹಾಕಲು ಅವಕಾಶ ಇದ್ದರೂ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಂದ ಇವುಗಳಿಗೆ ಅನುಮತಿ ಕೋರಿ ಅರ್ಜಿಗಳು ಚುನಾವಣಾಧಿಕಾರಿಗಳ ಕಚೇರಿಗೆ ಇದುವರೆಗೂ ಬಾರದಿರುವುದು ಗಮನಾರ್ಹವಾಗಿದೆ.

ಪರಿಸರ ಸ್ನೇಹಿ ಚುನಾವಣೆ ಆಚರಣೆಗೆ ಉದ್ಧೇಶದಿಂದ ಜಿಲ್ಲಾಡಳಿತವತಿಯಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಕುಂದಾಪುರ, ಉಡುಪಿ, ಕಾಪು , ಕಾರ್ಕಳದಲ್ಲಿ  ಆಯೋಜಿಸಿದ್ದ ತರಬೇತಿಯಲ್ಲೂ ಸಹ ಕಾಫಿ/ಟೀ ಕುಡಿಯಲು ಪೇಪರ್ ನಿಂದ ಮಾಡಿ ಗ್ಲಾಸ್‍ಗಳು , ಊಟಕ್ಕೆ ಅಡಿಕೆ ಹಾಳೆಯ ತಟ್ಟೆ ಮತ್ತು ಕುಡಿಯಲು ನೀರಿನ ಕ್ಯಾನ್ ಗಳನ್ನು ಇಡುವ ಮೂಲಕ  ಪ್ಲಾಸ್ಟಿಕ್ ಮುಕ್ತ ತರಬೇತಿ ಕೇಂದ್ರ ಆಯೋಜಿಸಲಾಗಿತ್ತು,  ಮತದಾನ ದಿದನಂದು ಸಹ ಎಲ್ಲಾ ಮತಗಟ್ಟೆಗಳಲ್ಲಿ ಇದೇ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಪಕ್ಷಗಳು ಸಹ ತಮ್ಮ ಸಭೆಗಳಲ್ಲಿ  ನೀರಿನ ಕ್ಯಾನ್ ಗಳನ್ನು ಬಳಸುತ್ತಿದ್ದು ಈ ಮೂಲಕ ತ್ಯಾಜ್ಯ ವಸ್ತು ಉತ್ಪಾದನೆಯಾಗದಂತೆ ಸಹಕಾರ ನೀಡುತ್ತಿದ್ದಾರೆ.

ಇದೀಗ ಏಪ್ರಿಲ್ 18ರಂದು ಮತ್ತು 23ರಂದು ಉಡುಪಿ ಜಿಲ್ಲೆಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಮುಂಜಾಗರೂಕತೆ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಮಾಹಿತಿ ನೀಡಲು ಬಟ್ಟೆಯ ಬ್ಯಾನರ್‍ಗಳನ್ನು ಅಳವಡಿಸಲಾಗುತ್ತಿದೆ. ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆಗಳಿಗೆ ವಿತರಿಸಲಾಗುವ ಎಲ್ಲಾ ರೀತಿಯ ಕಿಟ್‍ಗಳನ್ನು ಬಟ್ಟೆಯಲ್ಲಿ ತಯಾರಿಸಿದ ಬ್ಯಾಗುಗಳಲ್ಲಿಯೇ ವಿತರಿಸಲು ಸಿದ್ಧತೆ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಎಲ್ಲಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕಾರ ನೀಡಿರುವುದು ಶ್ಲಾಘನೀಯವಾಗಿದೆ. ಈ ನಿಟಿನಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.