ಉಡುಪಿ, ಜುಲೈ 4: ಆರೋಪಿತನಾದ ಸುರೇಶ್ ಹೆಚ್ ಇವರು ಜನವರಿ 6, 2012 ರಂದು ಬೆಳಗ್ಗೆ 8-30 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ದೊಡ್ಡಕುಂದ ಸರಕಾರಿ ಮುಡಗಲ್ ಮೀಸಲು ಅರಣ್ಯ ಪ್ರದೇಶದಿಂದ ಸುಮಾರು 25,000 ರೂ. ಬೆಲೆಬಾಳುವ 7 ಬೀಟೆ ಮರದ ದಿಮ್ಮಿಗಳನ್ನು ಕಳವು ಮಾಡಿ ಕೆಎ-20-ಎನ್-2588 ನೇ ಇನ್ನೋವಾ ಕಾರಿನಲ್ಲಿ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದಾಗ ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಬಳಿ ವಾಹನವನ್ನು ತಡೆದು ಆರೋಪಿತನನ್ನು ದಸ್ತಗಿರಿ ಮಾಡಿ ವಾಹನ ಹಾಗೂ ಬೀಟೆ ಮರದ ದಿಮ್ಮಿಗಳನ್ನು ಜಪ್ತುಪಡಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಬ್ರಹ್ಮಾವರದ ಆಗಿನ ಪೊಲೀಸ್ ಉಪನಿರೀಕ್ಷಕ ಹೊಸಕೇರಪ್ಪ ಇವರು ಪ್ರಕರಣ ದಾಖಲಿಸಿದ್ದು, ಬ್ರಹ್ಮಾವರ ವೃತ್ತ ನಿರೀಕ್ಷಕರಾಗಿದ್ದ ಪ್ರಭು ಡಿ. ಟಿ. ಅವರು ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಎಮ್.ಎನ್.ಮಂಜುನಾಥ್ರವರು ಆರೋಪಿತನಿಗೆ 2 ವರ್ಷ ಶಿಕ್ಷೆ ವಿಧಿಸಿ ಜುಲೈ 3, 2019 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕು. ಜಯಂತಿ ಕೆ. ರವರು ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.