ಹೊಸ ಸಂಸತ್ ಭವನಕ್ಕೆ ಶ್ರೀಗಣೇಶ: ಅಧಿವೇಶನಕ್ಕೂ ಮುನ್ನ ಕ್ಯಾಬಿನೆಟ್ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಸಂಸತ್ ಭವನದಲ್ಲಿ ಮೊದಲ ಅಧಿವೇಶನ ಇಂದು ಪ್ರಾರಂಭವಾಯಿತು. ನೂತನ ಸಂಸತ್ ಭವನದ ಮೊದಲ ಹಾಗೂ ಐತಿಹಾಸಿಕ ಅಧಿವೇಶನ ಇದಾಗಿದೆ. ನಾನು ಭಾರತದ ಸಂಸದರು ಮತ್ತು ಜನರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಸದನವನ್ನುದ್ದೇಶಿಸಿ ಹೇಳಿದರು.

ಹೊಸ ಸಂಸತ್ತಿಗೆ ಶಾಸಕಾಂಗ ಕಲಾಪಗಳನ್ನು ಬದಲಾಯಿಸುವ ಕೆಲವೇ ಗಂಟೆಗಳ ಮೊದಲು, ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಮಂಗಳವಾರ ಹಳೆಯ ಸಂಸತ್ ಭವನದ ಒಳ ಆವರಣದಲ್ಲಿ ಗುಂಪು ಛಾಯಾಚಿತ್ರಕ್ಕಾಗಿ ಜಮಾಯಿಸಿದರು. ಅವರು ನಂತರ ಸೆಂಟ್ರಲ್ ಹಾಲ್‌ನಲ್ಲಿ ಜಮಾಯಿಸಿದರು, ಅಲ್ಲಿ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಮತ್ತು ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಹಿರಿಯ ಸಂಸದೆ ಮೇನಕಾ ಗಾಂಧಿ ಭಾಷಣ ಮಾಡಿದರು.

ಹಳೆಯ ಸಂಸತ್ ಭವನವನ್ನು ‘ಸಂವಿಧಾನ ಸದನ’ ಎಂದು ಕರೆಯಲಾಗುವುದು ಹಾಗೂ ಅದರ ಘನತೆ ಉಳಿಯಬೇಕು ಎಂದು ಮೋದಿ ಹೇಳಿದರು.

https://twitter.com/i/status/1704046253401850194

ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟವು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಕೋಟಾವನ್ನು ಒದಗಿಸುವ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಈ ಕಾಯ್ದೆ ಜಾರಿಯಾಗುವ ಸಾಧ್ಯತೆ ಇಲ್ಲ. ಡಿಲಿಮಿಟೇಶನ್ ಪ್ರಕ್ರಿಯೆಯು ಮುಗಿದ ನಂತರವೇ ಇದನ್ನು ಹೊರತರಲಾಗುವುದು ಎಂದು ಮೂಲಗಳು ಹೇಳಿವೆ.

ಹೊಸ ಕಟ್ಟಡದಲ್ಲಿ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಸಂಸತ್ ಭವನದ ಭದ್ರತಾ ಸಿಬ್ಬಂದಿ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಂಡರು