ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ನಗರದಲ್ಲಿ ಎಬಿವಿಪಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ

ಉಡುಪಿ: ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯೊಬ್ಬಳಿಗೆ ಸಾಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನಾ ಸಭೆಯಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹೇಳಿಕೆಯನ್ನು ನೀಡಿದ್ದರು. ಇದೇ ಕಾರಣಕ್ಕಾಗಿ ಜು.28ರಂದು ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಮ್ ನಲ್ಲಿ ಜಿಗರ್ ಕೋಬ್ರಾ ಎಂಬ ಇನ್ಟಾಗ್ರಾಮ್ ಖಾತೆದಾರ ವಿದ್ಯಾರ್ಥಿನಿಯನ್ನು ಫಾಲೋ ಮಾಡಿ, ಕೆಟ್ಟ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ‌.

ಈ ಬಗ್ಗೆ ವಿದ್ಯಾರ್ಥಿನಿ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.