ಹಳೆಯಂಗಡಿ: ಇಲ್ಲಿಗೆ ಸಮೀಪದ ಪಕ್ಷಿಕೆರೆಯೆಂಬ ಊರು ಒಂದು ಕಾಲದಲ್ಲಿ ಆರಕ್ಕಿಂತಲೂ ಹೆಚ್ಚು ಕೆರೆಗಳನ್ನು ಹೊಂದಿದ್ದು, ಹಲವಾರು ಪಕ್ಷಿಗಳು ಈ ಕೆರೆಗಳಲ್ಲಿ ತಮ್ಮ ಬಾಯಾರಿಕೆ ತಣಿಸಿಕೊಳ್ಳುತ್ತಿದ್ದುದರಿಂದ ಈ ಸ್ಥಳಕ್ಕೆ ಪಕ್ಷಿಕೆರೆ ಎಂದೇ ಹೆಸರು ಬಂದಿತ್ತು. ಆದರೆ ಕೆರೆಗಳ ಬೀಡಾಗಿದ್ದ ಈ ಊರಿನಲ್ಲಿ ಈಗ ಹೇಳಿಕೊಳ್ಳುವುದಕ್ಕೂ ಒಂದೂ ಕೆರೆ ಇಲ್ಲ ಎಂಬಂತಾಗಿದೆ.
ಕೆಮ್ರಾಲ್ ಗ್ರಾ.ಪಂ. ವ್ಯಾಪ್ತಿಯ ಕೊಯಿಕುಡೆ ಎಂಬ ಪ್ರದೇಶವು ಪಕ್ಷಿಕೆರೆ ಎಂದು ಹೆಸರುವಾಸಿಯಾಗಿದ್ದು, ಇಲ್ಲಿ 77 ಸೆಂಟ್ಸ್ ವಿಸ್ತೀರ್ಣದ ಸುಮಾರು ಹತ್ತು ಅಡಿ ಆಳದ ಕೆರೆಯೊಂದು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಪರಿಸರ ಪ್ರೇಮಿ ಪಕ್ಷಿಕೆರೆಯ ಪೇಪರ್ ಸೀಡ್ ಕಂಪನಿಯ ಪ್ರವರ್ತಕ ನಿತಿನ್ ವಾಸ್ ಪುನರುಜ್ಜೀವನಗೊಳಿಸಲು ಮುಂದಾಗಿದ್ದಾರೆ.
ನಿತಿನ್ ವಾಸ್ ಇಲ್ಲಿನ ಗ್ರಾಮ ಪಂಚಾಯತ್ ಮತ್ತು ಮಂಗಳೂರಿನ ಎಂಸಿ.ಎಫ್ ಕಂಪನಿಯ ಸಿ.ಎಸ್.ಆರ್ ನಿಧಿಯ ಸಹಯೋಗದೊಂದಿಗೆ ಕೆರೆಯನ್ನು ಗತಕಾಲದ ವೈಭವಕ್ಕೆ ಮರಳಿಸುವ ಪಣತೊಟ್ಟಿದ್ದಾರೆ.
“ಹಿರಿಯರ ಪ್ರಕಾರ ಉಡುಪಿ ಮಠದಿಂದ ಕಟೀಲಿಗೆ ಪಕ್ಷಿಕೆರೆ ಮಾರ್ಗವಾಗಿ ಸಾಗುತ್ತಿದ್ದ ಮಠದ ಆನೆಗಳು ಪಕ್ಷಿಕೆರೆಯಲ್ಲಿ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿದ್ದವು. ಆದರೆ ಈಗ ಈ ಕೆರೆಗಳು ಅದೃಶ್ಯವಾಗಿವೆ. ಗ್ರಾಮದಲ್ಲಿ ಆರು ಕೆರೆಗಳಿದ್ದವು ಎಂದು ನಾವು ಭೂದಾಖಲೆಗಳ ಮೂಲಕ ಕಂಡುಕೊಂಡಿದ್ದೇವೆ. ಪಕ್ಷಿಕೆರೆ ಗ್ರಾಮದ ಹೊಸಕಾಡು ಎಂಬಲ್ಲಿ ಕೆರೆಯನ್ನು ಗುರುತಿಸಿದ್ದೇವೆ. ಅದರಲ್ಲಿ ಸ್ವಲ್ಪ ನೀರು ಇನ್ನೂ ಉಳಿದಿದೆ. ಇದನ್ನು ಕಾಟಿಪಳ್ಳ ಕೆರೆಯೆಂದು ಕರೆಯಲಾಗುತ್ತಿದ್ದು, ಇದನ್ನು ನಾವು ಪುನರುಜ್ಜೀವನಗೊಳಿಸಿ ಪಕ್ಷಿಕೆರೆಯೆಂದು ಹೆಸರಿಸಲಿದ್ದೇವೆ” ಎಂದು ನಿತಿನ್ ವಾಸ್ ಹೇಳಿದ್ದಾರೆ.
“ಬೇರೆ ಕೆರೆಗಳಿಗೆ ದಾಖಲೆಗಳಿದ್ದರೂ ಹೊಸಕಾಡಿನ 77 ಸೆಂಟ್ಸ್ ವಿಸ್ತೀರ್ಣದ ಈ ಕೆರೆಯ ದಾಖಲೆಗಳಿಲ್ಲ. ಹೊಸಕಾಡು ಕೆರೆಯಲ್ಲಿ ಸುಮಾರು 10 ಅಡಿ ಆಳದ ನೀರಿದೆ. ಈ ಕೆರೆಯ ಹೂಳೆತ್ತಿ ಅದನ್ನು ಗತಕಾಲದ ವೈಭವಕ್ಕೆ ಮರಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮೊದಲ ಹಂತದಲ್ಲಿ, ನಾವು 15 ಲಕ್ಷ ರೂಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಇದರಲ್ಲಿ ಕೆರೆಯ ಅಗಲೀಕರಣ, ದಾರಿ, ಮಿಯಾವಾಕಿ ಕಾಡುಗಳು, ವಾಕಿಂಗ್ ಟ್ರ್ಯಾಕ್ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ಅಲ್ಲದೆ, ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಸಂಪೂರ್ಣ ಪುನಃಸ್ಥಾಪನೆ ಕಾರ್ಯವನ್ನು ಕೈಗೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.