ಕಡಲ ತೀರ ಸ್ವಚ್ಛತೆಗಾಗಿ ಪಂಚಾಯತ್ ಪಿಡಿಒಗಳು ಶಾಶ್ವತ ವ್ಯವಸ್ಥೆ ಕೈಗೊಳ್ಳಿ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಉಡುಪಿ: ಕಡಲು ಮತ್ತು ನದಿ ತೀರ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಡುಪಿ ಜಿಲ್ಲೆಯ ಕಡಲತೀರಗಳನ್ನು ಪ್ರತಿ ನಿತ್ಯ ಸ್ವಚ್ಛ ಮತ್ತು ಸುಂದರವಾಗಿಡಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಶಾಶ್ವತ ವ್ಯವಸ್ಥೆಯನ್ನು ರೂಪಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಶನಿವಾರ ಜಿ.ಪಂ. ಸಭಾಂಗಣದಲ್ಲಿ ಜಿಲ್ಲೆಯ ಕಡಲ ತೀರಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಒಟ್ಟು 80 ಕಿ.ಮೀ ಕಡಲತೀರ ಪ್ರದೇಶವಿದ್ದು, ಈ ಕಡಲತೀರಗಳ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳ ಮೂಲಕ ಬೀಚ್ ನಲ್ಲಿ ಪ್ರತಿನಿತ್ಯ ಶಾಶ್ವತ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಶಾಶ್ವತ ವ್ಯವಸ್ಥೆಗಳನ್ನು ರೂಪಿಸಲು ಜಿಲ್ಲಾ ಪಂಚಾಯತ್ ನಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು.

ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಲತೀರಗಳ ಸ್ವಚ್ಚತೆಯನ್ನು ಸ್ಥಳೀಯ ಸಂಜೀವನಿ ಸ್ವಸಹಾಯ ಸಂಘಕ್ಕೆ ನೀಡುವ ಮೂಲಕ ಬೀಚ್ ನಲ್ಲಿ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ನಿರ್ವಹಣೆಯ ಜೊತೆಗೆ ಈ ಸಂಘದ ಮಹಿಳೆಯರಿಗೆ ಬೀಚ್ ನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ ನೀಡಿ ಅವರಿಗೂ ಅರ್ಥಿಕ ಲಾಭ ದೊರೆಯುವಂತೆ ಮಾಡಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸುವ ಕುರಿತಂತೆ ಅವರಿಗೆ ಅಗತ್ಯ ತರಬೇತಿಯನ್ನು ನೀಡಲಾಗುವುದು. ಬೀಚ್ ಗಳಲ್ಲಿ ಹಸಿ ಮತ್ತು ಒಣಕಸಗಳನ್ನು ಹಾಕಲು ಪ್ರವಾಸೋದ್ಯಮ ಇಲಾಖೆಯಿದ ಅಗತ್ಯವಿರುವಷ್ಟು ಸಂಖ್ಯೆಯ ಕಸದ ತೊಟ್ಟಿಗಳನ್ನು ಒದಗಿಸಲಾಗುವುದು ಎಂದರು.

ಆಯ್ದ ಕಡಲತೀರದ ಗ್ರಾಮ ಪಂಚಾಯತ್ ನಲ್ಲಿ,15 ದಿನಗಳೊಳಗೆ ಪೈಲಟ್ ಯೋಜನೆಯಾಗಿ ತ್ಯಾಜ್ಯ ನಿರ್ವಹಣೆಗಾಗಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ, ವಿವಿಧ ಸ್ವಯ ಸೇವಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಕಡಲತೀರ ವ್ಯಾಪ್ತಿಯ ಪಿಡಿಓ ಗಳು ಉಪಸ್ಥಿತರಿದ್ದರು.