ಉಡುಪಿ: ಬಡವರ-ಮಾನಸಿಕ ಅಸ್ವಸ್ಥರ ನೆರವಿಗಾಗಿ‌ ನೂತನ ಪಂಚರತ್ನ ಸೇವಾ‌ ಟ್ರಸ್ಟ್ ಉದ್ಘಾಟನೆ

ಉಡುಪಿ: ಬಡವರಿಗೆ, ಮಾನಸಿಕ ಅಸ್ವಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ನೂತನವಾಗಿ ಆರಂಭಿಸಲಾದ ‘ಪಂಚರತ್ನ ಸೇವಾ ಟ್ರಸ್ಟ್‌’ ಅನ್ನು ಉದ್ಯಾವರ ಹಾಲಿಮಾ ಸಾಬ್ಬು ಚಾರಿಟೇಬಲ್‌ ಟ್ರಸ್ಟ್‌ನ ಅಬ್ದುಲ್‌ ಜಲೀಲ್‌ ಸೋಮವಾರ ಉಡುಪಿ ಟಿ.ಎ. ಪೈ ಹಿಂದಿ ಭವನದಲ್ಲಿ ಉದ್ಘಾಟಿಸಿದರು.

ಅನಂತರ ಮಾತನಾಡಿದ ಅವರು, ಬಡಜನರ ಕಣ್ಣೀರು ಒರೆಸಲು ಈ ಟ್ರಸ್ಟ್‌ನ್ನು ಸ್ಥಾಪಿಸಿದ್ದು, ಇದಕ್ಕೆ ಜನರು,  ಸಂಘ ಸಂಸ್ಥೆ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಅವರು ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿ ದೇಣಿಗೆ‌ ನೀಡುತ್ತೇನೆ ಎಂದು ಭರವಸೆ ನೀಡಿದರು.

ಟ್ರಸ್ಟ್‌ನ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಉದ್ಯಮಿ ರಂಜನ್‌ ಕಲ್ಕೂರ ಮಾತನಾಡಿ, ಸೇವೆಯ ಅಗತ್ಯ ಇರುವವರಿಗೆ ಹಾಗೂ ದಾನಿಗಳ ನಡುವೆ ಸಂಪರ್ಕ ಸೇತುವೆಯಾಗಿ ಈ ಟ್ರಸ್ಟ್‌ ಕಾರ್ಯನಿರ್ವಹಿಸಲಿ.  ಇದರ ಸೇವೆ ಎಲ್ಲರಿಗೂ ಸಿಗುವಂತಾಗಲಿ ಎಂದು ಹಾರೈಸಿದರು.

ಪಂಚರತ್ನ ಸೇವಾ ಟ್ರಸ್ಟ್‌ ಅಧ್ಯಕ್ಷ ನಿತ್ಯಾನಂದ ಒಳಕಾಡು ಮಾತನಾಡಿ, ಸೂಕ್ತ ನೆಲೆ ಇಲ್ಲದೆ ಎಲ್ಲಂದರೆಲ್ಲಿ ಅಲೆದಾಡುವ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಕೊಡಿಸಿ, ಅವರನ್ನು ಗುಣಮುಖರನ್ನಾಗಿಸುವ ಆಶ್ರಮವೊಂದನ್ನು ನಿರ್ಮಿಸುವ ಚಿಂತನೆ ಇದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಒಂದರಿಂದ ಹತ್ತನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಉದ್ಯಮಿ ರವಿ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಯುಬಿಎಂ ಜಿಲ್ಲಾ ಚರ್ಚ್‌ ಬೋರ್ಡ್ ಮತ್ತು ಟ್ರಸ್ಟ್‌ ಅಸೋಸಿಯೇಶನ್‌ನ ಸದಾನಂದ ಕಾಂಚನ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಸರಳೇಬೆಟ್ಟು, ಉಪಾಧ್ಯಕ್ಷ ತಾರನಾಥ ಮೇಸ್ತ, ಕೋಶಾಧಿಕಾರಿ ಪಲ್ಲವಿ ಸಂತೋಷ್‌, ಜಂಟಿ ಕಾರ್ಯದರ್ಶಿ ಯತೀಶ್‌ ತಿಂಗಳಾಯ ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ್‌ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.