ದುಬೈ: ಕಾರ್ಗಿಲ್ ಯುದ್ಧದ ರೂವಾರಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 79 ವರ್ಷವಯಸ್ಸಾಗಿತ್ತು. 1999 ರಲ್ಲಿ, ಜನರಲ್ ಮುಷರಫ್ ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ಹೊರದಬ್ಬಿ ತಾನೇ ಪ್ರಧಾನಿ ಪಟ್ಟಕ್ಕೇರಿ ಸರ್ವಾಧಿಕಾರ ಮೆರೆದಿದ್ದರು.
ಒಂಬತ್ತು ವರ್ಷಗಳ ನಂತರ, ಆಸಿಫ್ ಅಲಿ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸರ್ಕಾರ ಮತ್ತು ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಷರೀಫ್‌ನ ಜಂಟಿ ದೋಷಾರೋಪಣೆಯನ್ನು ಎದುರಿಸಲಾಗದೆ, ಮುಷರಫ್ ಪಾಕಿಸ್ತಾನದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
ದಂಗೆ ಮತ್ತು ಸಂವಿಧಾನವನ್ನು ಬುಡಮೇಲು ಮಾಡಿದ ದೇಶದ್ರೋಹ; ಬೆನಜೀರ್ ಭುಟ್ಟೋ ಹತ್ಯೆಯಲ್ಲಿ ಪಿತೂರಿ, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ದಂಗೆಯನ್ನು ಮುನ್ನಡೆಸುತ್ತಿದ್ದ ಪ್ರಬಲ ಬುಡಕಟ್ಟು ಸರ್ದಾರ್ ನವಾಬ್ ಅಕ್ಬರ್ ಖಾನ್ ಬುಗ್ತಿಯ ಕೊಲೆ; ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿಯಾಗಿ ವಜಾಗೊಂಡ ಇಫ್ತಿಕಾರ್ ಚೌಧರಿಯ ಬೆಂಬಲಿಗರ ವಿರುದ್ಧ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಕರಾಚಿಯಲ್ಲಿ 24 ಜನರ ಹತ್ಯೆ; ಭಯೋತ್ಪಾದನೆಯ ವಿರುದ್ಧದ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೇನೆಯು ಭಯೋತ್ಪಾದಕ ಶಂಕಿತರೆಂದು ಜನರನ್ನು ಅಮೇರಿಕಾಗೆ ಮಾರಿದ ಹಲವಾರು ಆರೋಪಗಳು ಇವರ ಮೇಲಿದ್ದವು.
ಸಂವಿಧಾನವನ್ನು ಬುಡಮೇಲು ಮಾಡಿದ್ದಕ್ಕಾಗಿ ಅಪರಾಧಿ ಮತ್ತು ಮರಣದಂಡನೆ ಶಿಕ್ಷೆಗೆ ಗುರಿಯಾದುವ ಕಾರಣದಿಂದ ಸ್ವಯಂ ಗಡಿಪಾರಾಗಿ ದುಬೈನಲ್ಲಿ ವಾಸ್ತವ್ಯ ಹೂಡಿದ್ದರು. ಬೆನಜೀರ್ ಭುಟ್ಟೋ ಪ್ರಕರಣದಲ್ಲಿ ಅವರನ್ನು ದೇಶಭ್ರಷ್ಟ ಎಂದು ಘೋಷಿಸಲಾಗಿತ್ತು.