ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತನ್ನನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರು ಎಂಬ ಪಾಕ್ ಪತ್ರಕರ್ತನ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಯಿಂದ ದೇಶದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ ಮತ್ತು ಆ ಸಮಯದಲ್ಲಿ ಪಾಕಿಸ್ತಾನದ ಐಎಸ್ಐ ಜೊತೆ ಭಾರತಕ್ಕೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾಗಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಸಂದರ್ಶನದಿಂದ ಈ ವಿವಾದ ಹುಟ್ಟಿಕೊಂಡಿದೆ.
“ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಮತ್ತು ಪರೋಕ್ಷವಾಗಿ ಐ ಎಸ್ ಐ ಜೊತೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರು ರಾಷ್ಟ್ರೀಯ ಭದ್ರತೆಯನ್ನು ಹೇಗೆ ರಾಜಿ ಮಾಡಿಕೊಂಡರು ಮತ್ತು ಸಾಂವಿಧಾನಿಕ ಹುದ್ದೆಯನ್ನು ಹೇಗೆ ದುರುಪಯೋಗಪಡಿಸಿಕೊಂಡರು ಮತ್ತು ಐ.ಎನ್.ಸಿ ಅವರನ್ನು 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಏಕೆ ನೇಮಿಸಿತು ಎಂಬುದರ ಕುರಿತು ನಾವು ಸಂಪೂರ್ಣ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಮಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಆದರೆ ಇದೆಲ್ಲಾ ಸುಳ್ಳು ಆರೋಪ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.