ಭಾರತದಲ್ಲಿ ಪಾಕಿಸ್ತಾನದ ಫೇಸ್ ಕ್ರೀಂ ಅವಾಂತರ,18 ಮಹಿಳೆಯರಿಗೆ ಶುರುವಾಯ್ತು ಮೂತ್ರಪಿಂಡದ ಸಮಸ್ಯೆ, ಭಾರತದ ಈ ಉತ್ಪನ್ನಗಳೂ ಕೂಡ ಡೇಂಜರ್!

ನಾಗ್ಪುರ: ಬೆಳ್ಳಗಿನ ಚರ್ಮದ ಆಸೆ ಆರೋಗ್ಯಕ್ಕೆ ಮುಳುವಾಗಬಹುದು ಎಂಬ ಆತಂಕಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ಚರ್ಮ ಬಿಳಿಯಾಗಿಸುವ ಕ್ರೀಮ್ ಬಳಸುತ್ತಿದ್ದ 18 ಮಹಿಳೆಯರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವುದು ವೈದ್ಯಕೀಯ ತನಿಖೆಯಲ್ಲಿ ಪತ್ತೆಯಾಗಿದೆ.

ವರದಿಗಳ ಪ್ರಕಾರ, ಈ ಮಹಿಳೆಯರೆಲ್ಲರೂ ಪಾಕಿಸ್ತಾನದಲ್ಲಿ ತಯಾರಾಗುವ ‘ಗೋರಿ ಬ್ಯೂಟಿ ಕ್ರೀಮ್’ ಬಳಸುತ್ತಿದ್ದರು. ಪ್ರಯೋಗಾಲಯ ಪರೀಕ್ಷೆಯಲ್ಲಿ ಈ ಕ್ರೀಮ್‌ನಲ್ಲಿ ಪಾದರಸದ (Mercury) ಪ್ರಮಾಣ ಕಾನೂನುಬದ್ಧ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದ್ದು, ಇದೇ ಆರೋಗ್ಯ ಸಮಸ್ಯೆಗೆ ಕಾರಣವಾಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.

ಎಫ್‌ಡಿಎ ನಿಷೇಧ

ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ‘ಗೋರಿ ಬ್ಯೂಟಿ ಕ್ರೀಮ್’ ಸೇರಿದಂತೆ ಫೇಸ್ ಫ್ರೆಶ್ ಗೋಲ್ಡ್ ಬ್ಯೂಟಿ ಕ್ರೀಮ್, ಫೇಸ್ ಫ್ರೆಶ್ ಗೋಲ್ಡ್ ಬ್ಯೂಟಿ ಸೀರಮ್ ಹಾಗೂ ಗೋಲ್ಡನ್ ಸ್ಟಾರ್ ಬ್ಯೂಟಿ ಕ್ರೀಮ್ ಉತ್ಪನ್ನಗಳನ್ನು ‘ಪ್ರಮಾಣಿತ ಗುಣಮಟ್ಟವಲ್ಲ’ (NSQ) ಎಂದು ಘೋಷಿಸಿ, ಅವುಗಳ ಮಾರಾಟ, ವಿತರಣೆ ಹಾಗೂ ಬಳಕೆಯನ್ನು ತಕ್ಷಣದಿಂದಲೇ ನಿಷೇಧಿಸಿದೆ.

ಈ ಉತ್ಪನ್ನಗಳು ಮೀಶೋ ಹಾಗೂ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಆನ್‌ಲೈನ್ ವೇದಿಕೆಗಳ ಮೂಲಕ ಭಾರತದಲ್ಲಿ ಮಾರಾಟವಾಗುತ್ತಿದ್ದವು ಎನ್ನಲಾಗಿದೆ. ಪ್ರಕರಣ ಸಂಬಂಧ ಚೆಂಬೂರಿನ ಅಂಗಡಿಯೊಂದರ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ವೈದ್ಯಕೀಯ ಅಧ್ಯಯನದಲ್ಲಿ ಆತಂಕಕಾರಿ ಮಾಹಿತಿ

ಆರೋಗ್ಯ ಸಂಶೋಧಕ ಚಿರಾಗ್ ಬರ್ಜತ್ಯಾ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನಾಗ್ಪುರದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 18 ಮಹಿಳೆಯರ ವೈದ್ಯಕೀಯ ಮಾಹಿತಿ ಪರಿಶೀಲಿಸಿದಾಗ, ಅವರೆಲ್ಲರೂ ಒಂದೇ ರೀತಿಯ ಚರ್ಮ ಬಿಳಿಮಾಡುವ ಕ್ರೀಮ್ ಬಳಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಪಾದರಸವು ಚರ್ಮದ ಬಣ್ಣವನ್ನು ತಾತ್ಕಾಲಿಕವಾಗಿ ಬದಲಿಸಿದರೂ, ಅದು ದೇಹದಲ್ಲಿ ಸಂಗ್ರಹವಾಗಿ ಮೂತ್ರಪಿಂಡ ಸೇರಿದಂತೆ ಪ್ರಮುಖ ಅಂಗಗಳಿಗೆ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಘಟನೆ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. “ಪಾಕಿಸ್ತಾನದಲ್ಲಿ ತಯಾರಾದ ಈ ಕ್ರೀಮ್ ಭಾರತದಲ್ಲಿ ಹೇಗೆ ಮಾರಾಟವಾಗುತ್ತಿದೆ?” ಎಂದು ಹಲವರು ಪ್ರಶ್ನಿಸಿದ್ದಾರೆ. ಈ ನಡುವೆ, ಮೀಶೋ ಸಂಸ್ಥೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಂಬಂಧಿತ ಉತ್ಪನ್ನಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಿರುವುದಾಗಿ ತಿಳಿಸಿದೆ.

ವೈದ್ಯರ ಸಲಹೆ

ವೈದ್ಯರು ಚರ್ಮ ಬಿಳಿಮಾಡುವ ಕ್ರೀಮ್‌ಗಳನ್ನು ವೈದ್ಯಕೀಯ ಸಲಹೆ ಇಲ್ಲದೆ ಬಳಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಶೇಷವಾಗಿ ಆನ್‌ಲೈನ್‌ನಲ್ಲಿ ಖರೀದಿಸುವ ಸೌಂದರ್ಯವರ್ಧಕ ಉತ್ಪನ್ನಗಳ ಪದಾರ್ಥಗಳು, ಉತ್ಪಾದಕರ ವಿವರ ಮತ್ತು ಗುಣಮಟ್ಟದ ಪ್ರಮಾಣೀಕರಣವನ್ನು ಪರಿಶೀಲಿಸಿದ ಬಳಿಕವೇ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ. ತ್ವರಿತ ಫಲಿತಾಂಶದ ಭರವಸೆ ನೀಡುವ ಅಪರಿಚಿತ ಸೌಂದರ್ಯ ಉತ್ಪನ್ನಗಳ ಬಳಕೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.