ಕಾರ್ಗಿಲ್‌ನಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹವನ್ನು ಪಾಕಿಸ್ತಾನ ಸ್ವೀಕರಿಸಲಿಲ್ಲ: ಭಾರತ ಟಾಂಗ್‌

ನವದೆಹಲಿ: ಭಯೋತ್ಪಾದನೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಂತಹ ವಿಷಯಗಳಲ್ಲಿ ಪಾಕಿಸ್ತಾನ (Pakistan) ಅನುಸರಿಸುತ್ತಿರುವ ದ್ವಂದ್ವ ನಿಲುವು ಮತ್ತೊಮ್ಮೆ ಬಯಲಾಗಿದೆ. ಭಾರತವು (India) ವಿಶ್ವಸಂಸ್ಥೆ ಮುಂದೆ ಮತ್ತೊಮ್ಮೆ ಸ್ಪಷ್ಟ ಸಾಕ್ಷ್ಯಾಧಾರಗಳನ್ನಿಟ್ಟು, ಭಾರತದ ಜಮ್ಮು ಮತ್ತು ಕಾಶ್ಮೀರ ಹಾಗೂ ಆಂತರಿಕ ವಿಷಯಗಳ ಕುರಿತು ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಖಡಕ್‌ ಆಗಿ ಮಾತನಾಡಿದೆ.

ವಿಶೇಷ ಸಂದರ್ಭಗಳಲ್ಲಿ ಅಂತ್ಯಕ್ರಿಯೆಯ ಹಕ್ಕುಗಳಿಗೆ ಸಂಬಂಧಿಸಿದಂತೆ, ‘ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯ’ ಕುರಿತ ವಿಶೇಷ ವರದಿಗಾರರೊಂದಿಗೆ ಸಂವಾದ ನಡೆಯಿತು. ಭಾರತದ ಇತರ ಹಿರಿಯ ರಾಜತಾಂತ್ರಿಕರೊಂದಿಗೆ ಭಾಗವಹಿಸಿದ್ದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು, 1999ರ ಕಾರ್ಗಿಲ್ ಯುದ್ಧದ ವೇಳೆ ಮೃತಪಟ್ಟ ತಮ್ಮ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ಪಾಕಿಸ್ತಾನ ನಿರಾಕರಿಸಿತ್ತು ಎಂದು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ವಿವರಿಸಿದ್ದಾರೆ.

1999ರ ಕಾರ್ಗಿಲ್ ಕದನದಲ್ಲಿ ಮೃತಪಟ್ಟ ತಮ್ಮದೇ ಸೈನಿಕರ ಮೃತದೇಹಗಳನ್ನು ಸ್ವೀಕರಿಸಲು ಕೂಡ ನಿರಾಕರಿಸಿದ್ದ ರಾಷ್ಟ್ರವೊಂದು, ಈಗ ನಂಬಿಕೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಂತ್ಯಕ್ರಿಯೆಗಳ ಬಗ್ಗೆ ಅತ್ಯುತ್ಸಾಹದಿಂದ ಮಾತನಾಡುವುದು ತೀವ್ರ ವಿಪರ್ಯಾಸದ ಸಂಗತಿಯಾಗಿದೆ. ಅವರಿಗೆ ನಾನು ನೆನಪಿಸಲು ಬಯಸುತ್ತೇನೆ. ಪಾಕಿಸ್ತಾನದ ಅನೇಕ ಸೈನಿಕರನ್ನು ಮಿಲಿಟರಿ ಗೌರವಗಳೊಂದಿಗೆ ಹಾಗೂ ಇಸ್ಲಾಮಿಕ್ ಸಂಪ್ರದಾಯಗಳಿಗೆ ಅನುಗುಣವಾಗಿ ಸಮಾಧಿ ಮಾಡಿದ್ದು ಭಾರತೀಯ ಸೇನೆ,” ಎಂದು ಮಂಗಳಾನಂದನ್ ತಿಳಿಸಿದ್ದಾರೆ.

ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಪಾಕಿಸ್ತಾನ ಕುತೂಹಲ ಹೊಂದಿದೆ. ವಾಸ್ತವವಾಗಿ ರವಾಲಕೋಟ್‌ನಂತಹ, ತನ್ನ ಅಕ್ರಮ ವಶದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಭಾಗಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳತ್ತ ಅದು ಗಮನ ಹರಿಸಬೇಕಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಕ್ಷೀಣಿಸುತ್ತಿದೆ. ಅವರ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ. ತಮ್ಮದೇ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ರಾಷ್ಟ್ರವೊಂದು ಭಾರತಕ್ಕೆ ಉಪದೇಶ ನೀಡುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

ಈ ವಾರದ ಆರಂಭದಲ್ಲಿ, ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ಕುರಿತ ವಿಶೇಷ ವರದಿಗಾರರೊಬ್ಬರು ಸಲ್ಲಿಸಿದ ವರದಿಯಲ್ಲಿನ ದೋಷಗಳನ್ನು ಭಾರತ ಎತ್ತಿ ತೋರಿಸಿತ್ತು.