ನೇಪಾಳ ವಿರುದ್ಧ ಟಾಸ್​ ಗೆದ್ದ ಪಾಕಿಸ್ತಾನ​ ಬ್ಯಾಟಿಂಗ್: ಏಷ್ಯಾಕಪ್‌ ಕ್ರಿಕೆಟ್ ಆರಂಭ

ಮುಲ್ತಾನ್​ (ಪಾಕಿಸ್ತಾನ): ಈ ವರ್ಷದ ಏಕದಿನ ಕ್ರಿಕೆಟ್‌ ವಿಶ್ವಕಪ್​ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲೇ ನಡೆಯುತ್ತಿರುವ ಏಷ್ಯಾ ಕಪ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಇದೀಗ ಪರಸ್ಪರ ಮುಖಾಮುಖಿ ಆಗುತ್ತಿವೆ.ಕ್ರಿಕೆಟ್​ ಶಿಶು ನೇಪಾಳದ ವಿರುದ್ಧ ವಿಶ್ವದ ಅಗ್ರ ಶ್ರೇಯಾಂಕಿತ ಏಕದಿನ ಕ್ರಿಕೆಟ್‌ ತಂಡವಾದ ಪಾಕಿಸ್ತಾನ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಪಾಕಿಸ್ತಾನ ತಂಡ ಇಂದು ಮುಂಜಾನೆ ನೇಪಾಳ ತಂಡದ ವಿರುದ್ಧ ಆಡುವ 11ರ ಬಳಗವನ್ನು ನಿರ್ಧರಿಸಿ ಪ್ರಕಟಿಸಿತ್ತು. ಇದೀಗ ಪಂದ್ಯಾರಂಭವಾಗಿದೆ. ಟಾಸ್​ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಮಾಡುತ್ತಿದೆ.

“ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮೊದಲೇ ನಾವು ತಂಡವನ್ನು ಪ್ರಕಟಿಸಿದ್ದೇವೆ” ಎಂದು ಬಾಬರ್ ಆಜಮ್ ಹೇಳಿದರು. “ಪಿಚ್​ ಶುಷ್ಕವಾಗಿದೆ. ಮೊದಲು ಬ್ಯಾಟಿಂಗ್ ಮಾಡಲು ಸಹಕಾರಿಯಾಗುವಂತೆ ಕಾಣುತ್ತಿದೆ” ಎಂದರು.

ತಂಡಗಳು ಇಂತಿವೆ.. ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್​ ಕೀಪರ್​), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್

ಇದೇ ಮೊದಲ ಬಾರಿಗೆ ಏಷ್ಯಾಕಪ್​ ಆಡುತ್ತಿರುವ ನೇಪಾಳ ಈ ಪಂದ್ಯದಲ್ಲಿ ಪೈಪೋಟಿ ನೀಡುವ ಉತ್ಸಾಹದಲ್ಲಿದೆ. ಟಾಸ್​ ನಂತರ ಮಾತನಾಡಿದ ತಂಡದ ನಾಯಕ ರೋಹಿತ್ ಪೌಡೆಲ್, “ಖುಷಿಯಲ್ಲಿದ್ದೇವೆ. ಏಷ್ಯಾಕಪ್‌ನಲ್ಲಿ ಇದು ನಮ್ಮ ಮೊದಲ ಪಂದ್ಯ. ನೇಪಾಳದ ಪ್ರತಿಯೊಬ್ಬರೂ ಪಂದ್ಯದ ಬಗ್ಗೆ ಉತ್ಸುಕರಾಗಿದ್ದಾರೆ. ಇಲ್ಲಿನ ವಾತಾವರಣ ಮತ್ತು ಪಿಚ್​ ನೇಪಾಳಕ್ಕೆ ಹೋಲುತ್ತದೆ. ಬ್ಯಾಟ್ ಮಾಡಲು ಸುಂದರವಾದ ವಿಕೆಟ್‌ನಂತೆ ಕಾಣುತ್ತಿದೆ” ಎಂದು ಹೇಳಿದರು. ವೇಗದ ಬೌಲಿಂಗ್​ನಲ್ಲಿ ಅಸಾಧಾರಣ ಆಟಗಾರರನ್ನು ಹೊಂದಿರುವ ಪಾಕಿಸ್ತಾನಕ್ಕೆ ಸ್ಪಿನ್​ ಬೌಲಿಂಗ್​ನಲ್ಲಿ ಸಾಮರ್ಥ್ಯ ಹೊಂದಿರುವ ನೇಪಾಳ ಎದುರಾಳಿಯಾಗಿದೆ. ಇಲ್ಲಿ ಪಾಕಿಸ್ತಾನವು ನೇಪಾಳವನ್ನು ಕಡೆಗಣಿಸುವಂತಿಲ್ಲ. ಇತ್ತೀಚೆಗೆ ಪಾಕ್‌ ಅಫ್ಘಾನಿಸ್ತಾನದ ವಿರುದ್ಧ ಆಡಿದ ಪಂದ್ಯದಲ್ಲಿ ಸ್ಪಿನ್ ಸವಾಲು ಎದುರಿಸಲು ಹರಸಾಹಸಪಟ್ಟಿತ್ತು. ನೇಪಾಳದಲ್ಲಿ 23 ವರ್ಷದ ಸಂದೀಪ್ ಲಮಿಚಾನೆ ಅವರು ಪಾಕ್​ಗೆ ತಲೆನೋವಾಗಿ ಕಾಡಲಿದ್ದಾರೆ. 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸಂದೀಪ್, ಈವರೆಗೆ 49 ಏಕದಿನ ಪಂದ್ಯಗಳಿಂದ 111 ವಿಕೆಟ್‌ಗಳನ್ನು ಪಡೆದಿದ್ದಾರೆ.