ಇಸ್ಲಾಮಾಬಾದ್: ತನ್ನ ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ಇರಾನ್ ಮೇಲೆ ಪ್ರತಿದಾಳಿ ಮಾಡುವ ಮೂಲಕ ಪಾಕಿಸ್ತಾನವು ಸೇಡು ತೀರಿಸಿಕೊಂಡಿದೆ.
ಪಾಕಿಸ್ತಾನದಲ್ಲಿರುವ ಜೈಶ್ ಅಲ್ ಅದ್ಲ್ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವೂ ವಾಯುದಾಳಿ ಮೂಲಕ ಪ್ರತ್ಯುತ್ತರ ನೀಡಿದೆ. ಇರಾನ್ನಲ್ಲಿರುವ ಬಲೂಚಿಸ್ತಾನ ಪ್ರತ್ಯೇಕತಾವಾದಿಗಳ ನೆಲೆಗಳ ಮೇಲೆ ಪಾಕಿಸ್ತಾನವು ಗುರುವಾರ (ಜನವರಿ 18) ವಾಯುದಾಳಿ ನಡೆಸಿದೆ.
“ಪಾಕಿಸ್ತಾನ ಕೂಡ ಇರಾನ್ ಮೇಲೆ ವಾಯುದಾಳಿ ನಡೆಸಿದೆ. ಪ್ರತ್ಯೇಕ ಬಲೂಚಿಸ್ತಾನಕ್ಕೆ ಬೇಡಿಕೆ ಇಟ್ಟಿರುವ ಬಂಡುಕೋರರು ಇರಾನ್ನಲ್ಲಿ ನೆಲೆಸಿದ್ದು, ಅವರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದಷ್ಟೇ ಹೇಳಬಲ್ಲೆ” ಎಂದು ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಷಿಪಣಿ ಹಾಗೂ ಡ್ರೋನ್ಗಳ ಮೂಲಕ ಇರಾನ್ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ ಎನ್ನಲಾಗಿದೆ. ದಾಳಿಯಲ್ಲಿ ಮೂವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಸೇರಿ ಒಟ್ಟು ಏಳು ಜನ ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಎರಡು ಉಗ್ರರ ನೆಲೆಗಳ ಮೇಲೆ ಮಾತ್ರ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಇರಾನ್ ಅಮಾಯಕರ ಮೇಲೆ ದಾಳಿ ನಡೆಸಿದೆ ಎಂಬಂತೆ ಪಾಕಿಸ್ತಾನ ಬಿಂಬಿಸಿದೆ.
“ಇರಾನ್ ಕ್ಷಿಪಣಿ ದಾಳಿಗೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯ ಪರಿಣಾಮವನ್ನು ಇರಾನ್ ಗಂಭೀರವಾಗಿ ಎದುರಿಸಬೇಕಾಗುತ್ತದೆ” ಎಂದು ಪಾಕಿಸ್ತಾನ ಎಚ್ಚರಿಸಿತ್ತು. ಪರಿಣಾಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನವು ಪ್ರತಿದಾಳಿ ಮಾಡಿದೆ.