ದುಬೈ: ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ.
ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತು. ಆದರೆ ಇಂದು ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಾಣುವ ಮೂಲಕ ಅಜೇಯ ಓಟಕ್ಕೆ ಕಡಿವಾಣ ಬಿದ್ದಿದೆ. ಭಾರತದ ವಿರುದ್ಧ ಪಾಕ್ ಐತಿಹಾಸಿಕ ಗೆಲುವು ದಾಖಲಿಸಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ಗಳ ಸವಾಲಿನ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಆರಂಭಿಕರಾದ ನಾಯಕ ಬಾಬರ್ ಆಜಂ (68*) ಹಾಗೂ ಮೊಹಮ್ಮದ್ ರಿಜ್ವಾನ್ (79*) ಶತಕದ ಜೊತೆಯಾಟದ ನೆರವಿನಿಂದ 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿದೆ.