ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಮೈ ಮಹಾಲಿಂಗ ನಾಯ್ಕ್ ಮನೆಗೆ ಪೇಜಾವರ ಶ್ರೀ ಭೇಟಿ; ಮಹಾಲಿಂಗರ ಸಾಧನೆ ದೇಶಕ್ಕೆ ಮಾತ್ರವಲ್ಲ, ಜಗತ್ತಿಗೇ ಸ್ಫೂರ್ತಿ ಎಂದ ಶ್ರೀಗಳು

ಬಂಟ್ವಾಳ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರೈತ ಅಮೈ ಮಹಾಲಿಂಗ ನಾಯ್ಕ್ ತೋಟಕ್ಕೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ಶ್ರೀಗಳ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ಮಹಾಲಿಂಗ ಅವರು ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಶ್ರೀಗಳನ್ನು ಬರಮಾಡಿಕೊಂಡರು.

ತೋಟಕ್ಕೆ ತೆರಳಿದ ಶ್ರೀಗಳು, ಮಹಾಲಿಂಗರು ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು. ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ, ತುಂಬಿರುವ ಸಮೃದ್ಧ ಜಲಸೆಲೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಬಳಿಕ ಮನೆಗೆ ತೆರಳಿದ ಶ್ರೀಗಳಿಗೆ ಮಹಾಲಿಂಗ ನಾಯ್ಕರ ಮನೆಯವರು ಗೌರವಾರ್ಪಣೆಗೈದರು.

ಈ ವೇಳೆ ಶ್ರೀಗಳು ನಾಯ್ಕರಿಗೆ ಶಾಲು, ಶ್ರೀಕೃಷ್ಣನ ವಿಗ್ರಹ ಇರುವ ಕಾಷ್ಠ ಮಂಟಪದ ಸ್ಮರಣಿಕೆ, ನಗದು, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸ್ಥಳೀಯರಾದ ಜನಾರ್ದನ ಭಟ್ , ಪಂಚಾಯತ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.