ಪಡುಕುತ್ಯಾರು ಆನೆಗುಂದಿ ಶ್ರೀ ಪಟ್ಟಾಭಿಷೇಕ ವರ್ಧಂತಿ ಸಂಪನ್ನ

ಉಡುಪಿ: ಸಾಮಾಜಿಕ ಜಾಲತಾಣಗಳ ನವ ಮಾಧ್ಯಮದ ಸಂಪರ್ಕದಲ್ಲಿರುವ ಎಳೆಯ ಮಕ್ಕಳಿಗೆ ಹೆತ್ತವರು ಸಂಸ್ಕಾರಯುತ ಜೀವನ ನಡೆಸುವುದನ್ನು ಕಲಿಸುವ ಪ್ರಯತ್ನ ನಡೆಯಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು.

ಪಡುಕುತ್ಯಾರು ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಜರುಗಿದ ತಮ್ಮ ಪಟ್ಟಾಭಿಷೇಕ ಮಹೋತ್ಸವದ 13ನೇ ವರ್ಷದ ವರ್ಧಂತ್ಯುತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ವೇ.ಬ್ರ. ಶಂಕರ ಆಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ ಅವರು ಗುರುಪೀಠಗಳು ಮತ್ತು ಯುವ ಜನತೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ:

2021, 2022, 2023 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್. ಸಿ, ಪಿ.ಯು.ಸಿ/ ಪ್ಲಸ್ ಟು ಪರೀಕ್ಷೆಗಳಲ್ಲಿ ಶೇ.95 ಮತ್ತು ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಪದವಿ, ಮೆಡಿಕಲ್ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಅಭಿನಂದಿಸಲಾಯಿತು.

ಶ್ರೀನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯಲ್ಲಿ ಋಕ್ ಸಂಹಿತಿಯನ್ನು ಪೂರ್ತಿ ಗೊಳಿಸಿದ ಎರಡನೇ ತಂಡದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಸಂತ ವೇದ ಶಿಬಿರದ ಸಮಾರೋಪದಲ್ಲಿ ಸ್ಪರ್ಧಾ ವಿಜೇತರಿಗೆ ಹಾಗೂ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಗಂಗಾಧರ ಆಚಾರ್ಯ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು.

ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ:

ಶ್ರೀ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು ಅವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಬ್ರಹ್ಮಶ್ರೀ ಸೀತಾರಾಮ ಶಾಸ್ತ್ರಿ ಮಂಗಳೂರು (ವೈದಿಕ), ಮಂಟಪ ಕೇಶವ ಆಚಾರ್ಯ ಸಾಲಿಗ್ರಾಮ, ಮಂಜುನಾಥ ಆಚಾರ್ಯ ಚಿತ್ರಪಾಡಿ, ವ್ಯಾಸರಾಯ ಆಚಾರ್ಯ ಪಾದೂರು, ದಿವಾಕರ ಆಚಾರ್ಯ ಕೋಟೆಕಾರು (ಶಿಲ್ಪ), ವಿಘ್ನೇಶ್ವರ ಭಟ್ ಪುತ್ತೂರು (ಜ್ಯೋತಿಷ್ಯ), ಡಾ.ಸಿ.ಆರ್.ಚಂದ್ರಶೇಖರ್ ಬೆಂಗಳೂರು (ವೈದ್ಯಕೀಯ), ನೇಜಾರು ವಿಶ್ವನಾಥ ರಾವ್ ಕತಾರ್, ಬಿ. ವಿಶ್ವನಾಥ ರಾವ್ ಕೊಯಮತ್ತೂರು (ಮರಣೋತ್ತರ) (ಉದ್ಯಮ) ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿಜಯಕುಮಾರ್ ಕುಂಟಾಡಿ ಕೆ.ಎ.ಎಸ್., ಬ್ರಹ್ಮಾವರ ಡಾ. ಗೋಪಾಲಕೃಷ್ಣ ಹೊಸದಿಲ್ಲಿ ಅವರಿ ವಿಶೇಷ ಗೌರವಾಭಿನಂದನೆ ನಡೆಯಿತು.