ಮೂಡಬಿದ್ರೆ: ನೀರಿನ ದುರ್ಬಳಕೆ ಸಾಮಾಜಿಕ ಅಪರಾಧವಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಜೈಲಿಗಟ್ಟುವಂತಹ ಕಠಿಣ ಕಾನೂನು ಬಂದರೂ ಅಚ್ಚರಿ ಇಲ್ಲವೆಂದು ಜಲತಜ್ಞ, ಅಡಿಕೆ ಪತ್ರಿಕೆ ಸಂಪಾದಕ ಡಾ. ಶ್ರೀ ಪಡ್ರೆ ಎಚ್ಚರಿಸಿದ್ದಾರೆ.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಎನ್‌ಸಿಸಿ ನೇವಲ್ ವಿಂಗ್, ಮಾನವಿಕ ಸಂಘ ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ “ಮಳೆ ಕೊಯ್ಲು: ಏನು, ಏಕೆ ಮತ್ತು ಹೇಗೆ” ಎಂಬ ವಿಷಯದ ಕುರಿತು ಮಾತಾನಾಡಿದರು.
ನೀರು ಸಮಾಜದ ಸಂಪತ್ತು. ಬತ್ತಿ ಹೋದ ನದಿ, ಬಾವಿ, ಕೆರೆಗಳನ್ನು ಸಾಮುದಾಯಿಕ ಪಾಲ್ಗೊಳ್ಳುವಿಕೆ ಮೂಲಕ ಪುನರುಜ್ಜೀವನಗೊಳಿಸಿ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಅನೇಕ ಯಶಸ್ವಿ ಪ್ರಯೋಗಗಳು ನಮ್ಮ ಕಣ್ಣ ಮುಂದಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ಮೂಡುಬಿದಿರೆಯಲಿ ಕಳೆದ ೨೫ ವರ್ಷಗಳಿಂದ ೫೦೦ ಅಡಿಗಳಷ್ಟು ಜಲಮಟ್ಟ ಕುಸಿತ ಕಂಡಿದೆ. ಈ ಬಗ್ಗೆ ಜನರು ಜಾಗೃತರಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಎನ್ನೆನ್ನೆಸ್ ವತಿಯಿಂದ ಕಟ್ಟಗಳನ್ನು ಕಟ್ಟುವ ಕೆಲಸ ನಡೆಸಲಾಗುತ್ತಿದೆ ಎಂದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಬಿ., ಎನ್‌ಸಿಸಿ ನೇವಲ್ ವಿಂಗ್ ಅಧಿಕಾರಿ ನಾಗರಾಜ್ ಎಮ್., ಮಾನವಿಕ ಸಂಘದ ಸಂಯೋಜಕರಾದ ಜಯಶ್ರೀ, ಸವಿತಾ ಮತ್ತಿತ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸುನಾಯಿನ ಫಾತಿಮಾ ಸ್ವಾಗತಿಸಿ, ಚಿತ್ರ ವಂದಿಸಿ, ಅಫ್ರ ನಿರೂಪಿಸಿದರು.
ಮಾಯವಾಗುತ್ತಿರುವ ಮದಕಗಳು
ನೀರಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮದಕಗಳು ಇಂದು ಕಣ್ಮರೆಯಾಗುತ್ತಿವೆ. ಉಡುಪಿ ಜಿಲ್ಲೆಯಲ್ಲಿದ್ದ ಸಾಕಷ್ಟು ಮದಕಗಳು ಇಂದು ನಾಶವಾಗಿವೆ ಎಂದು ಶ್ರೀ ಪಡ್ರೆ ವಿಷಾದಿಸಿದರು. ಓಡುವ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲಿಸಿ, ನಿಂತ ನಿರನ್ನು ಇಂಗಿಸುವ ಹಾಗೆ ಮಾಡಬೇಕು. ಇದಕ್ಕಾಗಿ
ಮಳೆನೀರು ಕೊಯ್ಲು, ಇಂಗು ಗುಂಡಿ ನಿರ್ಮಾಣ, ಛಾವಣಿ ನೀರು ಸಂಗ್ರಹ ಅತೀ ಮುಖ್ಯ ಎಂದರು.












