ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರವು
ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂ. ಗೆ 2040 ರೂ. ಮತ್ತು ಗ್ರೇಡ್ ಎ ಭತ್ತಕ್ಕೆ 2060 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಓ4 ಭತ್ತದ ತಳಿಗಳನ್ನು ಜಿಲ್ಲೆಯ ರೈತರಿಂದ ಖರೀದಿಸಿ, ಅದನ್ನು ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ, ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಸ್ಥಳೀಯ ತಳಿಗಳ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ 500 ರೂ. ಪ್ರೋತ್ಸಾಹಧನ ನೀಡಲು ಆದೇಶಿಸಿದ್ದು, ಪ್ರತಿ ಕ್ವಿಂ. ಭತ್ತಕ್ಕೆ ಒಟ್ಟು 2540 ರೂ. ನಿಗದಿಪಡಿಸಲಾಗಿರುತ್ತದೆ.
ಜಿಲ್ಲೆಯ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 16 ಕ್ವಿಂ. ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂ. ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದ್ದು, ನವೆಂಬರ್ 21 ರಿಂದ ಒಂದು ತಿಂಗಳು ರೈತರ ನೋಂದಣಿ ಕಾರ್ಯವನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕೃಷಿ ಮಾರುಕಟ್ಟೆ ಸಮಿತಿಯ ಎ.ಪಿ.ಎಂ.ಸಿ ಯಾರ್ಡ್ಗಳಲ್ಲಿ, ಕಾಪು, ಬ್ರಹ್ಮಾವರ, ಕೋಟ, ಬೈಂದೂರು ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ, ಕುಂದಾಪುರ ತಾಲೂಕು ವಂಡ್ಸೆ ವಿ.ಎಸ್.ಎಸ್.ಎನ್ ಹಾಗೂ ಹೆಬ್ರಿ ತಾಲೂಕು ಕಚೇರಿಯಲ್ಲಿ ಕೈಗೊಳ್ಳಲಿದ್ದು, ಡಿಸೆಂಬರ್ 1 ರಿಂದ 2023 ಫೆಬ್ರವರಿ 28 ರ ವರೆಗೆ ಭತ್ತ ಖರೀದಿ ಕಾರ್ಯ ನಡೆಯಲಿದೆ.
ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ದತ್ತಾಂಶದಲ್ಲಿ ಸೇರ್ಪಡೆಗೊಂಡು ಮತ್ತು ಸೇರ್ಪಡೆಗೊಂಡಿರುವ ಬಗ್ಗೆ ಫ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯ ಮಾಹಿತಿಯೊಂದಿಗೆ ನೋಂದಣಿ ಕೇಂದ್ರದಲ್ಲಿ ನೋಂದಾಯಿಕೊಳ್ಳಬಹುದಾಗಿದೆ.
ಕೃಷಿ ಇಲಾಖೆಯ ಗುಣಮಟ್ಟ ಪರಿವೀಕ್ಷಕರು ಸರ್ಕಾರ ನಿಗದಿಪಡಿಸಿರುವ ಮಾನದಂಡದಂತೆ ಎಫ್ಎಕ್ಯೂ ಗುಣಮಟ್ಟ ಹೊಂದಿರುವ ಭತ್ತವನ್ನು ಪರಿಶೀಲಿಸಿ, ಖರೀದಿಸಲು ಕ್ರಮ ಕೈಗೊಳ್ಳಲಿದ್ದು, ರೈತರು ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.