ಭತ್ತದ ಮೋಟೆ ಹೊತ್ತಿದ್ದ ಲಾರಿ ಕಾರಿನ ಮೇಲೆ ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಪರ್ಕಳ: ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಕೆಳಪರ್ಕಳದಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಪ್ರವಾಸಿ ಕಾರುಗಳ ಮೇಲೆ ಪಲ್ಟಿಯಾಗಿದೆ. ಇದರಲ್ಲಿ ಒಂದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಭತ್ತದ ಮೂಟೆಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಪ್ರಯಾಣಿಕರು ಕೆಲಹೊತ್ತು ಪರದಾಡಿದರು. ಕಾರಿನಲ್ಲಿದ್ದವರು ಪವಾಡಸದೃಶರಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಇಲ್ಲಿನ ಮಣಿಪಾಲ- ಪರ್ಕಳ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಂದ ಆಗಮಿಸುವ ವಾಹನ ಚಾಲಕರು ಉಡುಪಿಯಿಂದ ಕಾರ್ಕಳಕ್ಕೆ ತೆರಳುವಾಗ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೊಸ ರಸ್ತೆ ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಕಳೆದ 15 ದಿನಗಳಿಂದ ಸಂಚಾರ ವ್ಯತ್ಯಯವಾಗಿದ್ದು, ಇಲ್ಲಿ ಸೂಚನಾ ಫಲಕಗಳಾಗಲೀ, ರಕ್ಷಣಾತ್ಮಕ ಗೋಡೆಗಳಾಗಲೀ ಇಲ್ಲವೆ ಇಲ್ಲ. ಇದರಿಂದ ವಾಹನ ಸವಾರರು ಯಾವ ರಸ್ತೆಯಲ್ಲಿ ಸಂಚರಿಸಬೇಕೆನ್ನುವ ಗೊಂದಲಕ್ಕೆ ಒಳಗಾಗಿ ಅಪಘಾತಗಳಿಗೆ ಎಡೆಯಾಗುತ್ತಿದ್ದಾರೆ. ಈ ಮಾರ್ಗದಲ್ಲಿ ಅಪಘಾತಗಳು ನಿತ್ಯವೆಂಬಂತಾಗಿದ್ದು ಸ್ಥಳೀಯ ಆಡಳಿತಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಗಮನ ಹರಿಸುತ್ತಿಲ್ಲ ಎನ್ನುವ ಕೂಗು ಸಾರ್ವಜನಿಕರಿಂದ ವ್ಯಕ್ತವಾಗಿದೆ.