ಉಡುಪಿ: ಬೆಂಗಳೂರಿನ ಪಾದರಾಯನಪುರದಲ್ಲಿ ರವಿವಾರ ಸಂಜೆ ನಡೆದಿರುವ ಘಟನೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕ್ವಾರಂಟೈನ್ ನಲ್ಲಿ ಕೊರೋನ ಸೋಂಕು ಶಂಕಿತರನ್ನು ಕ್ವಾರಂಟೈನ್ ಮಾಡುವ ವೇಳೆ ಕೆಲ ಕಿಡಿಗೇಡಿಗಳು ಗಲಾಟೆ ನಡೆಸಿ ಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಅತ್ಯಂತ ಖಂಡನೀಯ ಎಂದು ಹೇಳಿರುವ ಅವರು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ಅರೋಗ್ಯ ಸೇವಾ ಸಿಬ್ಬಂದಿಗಳು ಹಾಗು ಪೊಲೀಸರಿಗೆ ಪೂರ್ಣ ಸಹಕಾರ ನೀಡಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಇಡೀ ಮುಸ್ಲಿಮ್ ಸಮುದಾಯ ದೇಶಾದ್ಯಂತ ಕೊರೊನ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾದ ಜುಮಾ ನಮಾಜನ್ನೇ ಕಳೆದ ನಾಲ್ಕು ವಾರಗಳಿಂದ ಬಿಟ್ಟು ಸಹಕರಿಸಿದೆ. ಹೀಗಿರುವಾಗ ಇಂತಹ ಕೆಲವೇ ಕೆಲವು ಕಿಡಿಗೇಡಿಗಳ ತಪ್ಪು ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಿದೆ. ಪಾದರಾಯಣಪುರದಲ್ಲಿ ದುಷ್ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು. ಅದೇ ಇಂತಹ ಒಂದೆರಡು ಘಟನೆಗಳನ್ನು ಬಳಸಿಕೊಂಡು ಇಡೀ ಮುಸ್ಲಿಂ ಸಮುದಾಯದ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿರುವ ಕೆಲವರು ಹಾಗು ಕೆಲವು ಮಾಧ್ಯಮಗಳು ಕೂಡ ಇಂತಹ ಅಪಪ್ರಚಾರದ ಅಭಿಯಾನವನ್ನು ಕೈಬಿಡಬೇಕು ಎಂದವರು ಆಗ್ರಹಿಸಿದ್ದಾರೆ.